ನಹಾನ್ (ಹಿ.ಪ್ರ.), ಮಾ.22-ಸುಮಾರು 6,000 ಕೋಟಿ ರೂ.ಗಳ ವಂಚನೆ ಪ್ರಕರಣದ ಸಂಬಂಧ ಹಿಮಾಚಲ ಪ್ರದೇಶದ ಇಂಡಿಯನ್ ಟೆಕ್ನೋಮ್ಯಾಕ್ ಕಂಪನಿ ಲಿಮಿಟೆಡ್ನ ನಿರ್ದೇಶಕ ವಿನಯ್ ಕುಮಾರ್ ಶರ್ಮಾ ಅವರನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. ಇವರು ಹಿರಿಯ ಐಎಎಸ್ ಅಧಿಕಾರಿ ಎಂ.ಎಲ್. ಶರ್ಮಾ ಅವರ ಪುತ್ರ.
ಹಿಮಾಚಲ ಪ್ರದೇಶದ ಅತಿ ದೊಡ್ಡ ವಂಚನೆ ಹಗರಣವೆಂದೇ ಹೇಳಲಾದ ಈ ಪ್ರಕರಣದಲ್ಲಿ ಒಟ್ಟು 6,000 ಕೋಟಿ ರೂ.ಗಳ ವಂಚನೆ, ಅಕ್ರಮ-ಅವ್ಯವಹಾರಗಳು ಬೆಳಕಿಗೆ ಬಂದಿವೆ.
ಈ ಪ್ರಕರಣದ ಮುಖ್ಯ ಆರೋಪಿ ಮತ್ತು ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಕುಮಾರ್ ಶರ್ಮಾ ನಾಪತ್ತೆಯಾಗಿದ್ದು, ವಿದೇಶಕ್ಕೆ ಪರಾರಿಯಾಗಿರುವ ಶಂಕೆ ಇದೆ.
12,737 ಕೋಟಿ ರೂ.ಗಳ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ಬಿ) ಹಗರಣ ಸೇರಿದಂತೆ ದೊಡ್ಡ ಮಟ್ಟದ ವಿವಿಧ ವಂಚನೆ ಪ್ರಕರಣಗಳು ದೇಶದ ಆರ್ಥಿಕ ವಲಯವನ್ನು ತಲ್ಲಣಗೊಳಿಸುತ್ತಿರುವ ಸಂದರ್ಭದಲ್ಲೇ ಮತ್ತೊಂದು ಕರ್ಮಕಾಂಡ ಬಯಲಾಗಿದೆ.
ಪೆÇಂಟಾ ಸಾಹೀಬ್ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಈ ಸಂಸ್ಥೆ ತಮ್ಮ ಸಿಬ್ಬಂದಿಗೆ ವೇತನ, ಉದ್ಯೋಗಿಗಳ ಭವಿಷ್ಯ ನಿಧಿ, ಆದಾಯ ತೆರಿಗೆ, ಮಾರಾಟ ತೆರಿಗೆ ಹಾಗೂ ವಿದ್ಯುತ್ ಶುಲ್ಕ ಇತ್ಯಾದಿ ಪಾವತಿಸದೆ ಕೋಟ್ಯಂತರ ರೂ.ಗಳನ್ನು ವಂಚಿಸಿದೆ ಎಂದು ಸಿಐಡಿ ಅಧಿಕಾರಿಗಳು ಆರೋಪಿಸಿದ್ದಾರೆ.
ಕಳೆದ ನಾಲ್ಕು ವರ್ಷಗಳಿಂದ ಸಂಸ್ಥೆಯ ವಿರುದ್ಧ ಭಾರೀ ಆರ್ಥಿಕ ವಂಚನೆ, ಮೋಸ, ಬೇನಾಮಿ ಆಸ್ತಿ ಖರೀದಿ ಮತ್ತು ಕ್ರಿಮಿನಲ್ ಪಿತೂರಿ ಪ್ರಕರಣಗಳ ಬಗ್ಗೆ ಹಿಮಾಚಲ ಪ್ರದೇಶದ ವಿವಿಧ ಇಲಾಖೆಗಳು ತನಿಖೆ ನಡೆಸುತ್ತಿವೆ.
ಈ ಪ್ರಕರಣಗಳ ಸಂಬಂಧ ಸಂಸ್ಥೆಯ ನಿರ್ದೇಶಕ ವಿನಯ್ ಕುಮಾರ್ ಶರ್ಮನನ್ನು ನಿನ್ನೆ ಬಂಧಿಸಿ ಪೆÇೀಂಟಾ ಸಾಹೀಬ್ನ ಸ್ಥಳೀಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿ, ಆರೋಪಿಯನ್ನು ಮಾ.24ರವರೆಗೆ ಸಿಬಿಐ ಕಸ್ಟಡಿಗೆ ಒಪ್ಪಿಸಲಾಗಿದೆ.
ವಂಚನೆ ಪ್ರಕರಣಗಳು ಬೆಳಕಿಗೆ ಬರುತ್ತಿದ್ದಂತೆ 2014ರ ಮಾರ್ಚ್ನಲ್ಲಿ ಸಂಸ್ಥೆಯ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿ ಉನ್ನತಾಧಿಕಾರಿಗಳು ನಾಪತ್ತೆಯಾಗಿದ್ದರು.