![jds-1519905102](http://kannada.vartamitra.com/wp-content/uploads/2018/03/jds-1519905102-600x381.jpg)
ಮಂಡ್ಯ, ಮಾ.22- ತ್ರೀವ ಕುತೂಹಲ ಕೆರಳಿಸಿದ್ದ ಮಂಡ್ಯ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಸ್ಥಾನ ಜೆಡಿಎಸ್ ತೆಕ್ಕೆಗೆ ಬಿದ್ದಿದೆ.
ಜಿಲ್ಲಾ ಪಂಚಾಯ್ತಿ ಅಧ್ಯಕ್ಷಗಾದಿಗೆ ಇಂದು ಚುನಾವಣೆ ನಡೆದು, ಜೆಡಿಎಸ್‍ನ ನಾಗರತ್ನ ಸ್ವಾಮಿ ಅವರು ಆಯ್ಕೆಯಾಗಿದ್ದಾರೆ. ಚುನಾವಣೆಯಲ್ಲಿ 41 ಮತಗಳು ಚಲಾವಣೆಯಾಗಿದ್ದು, ನಾಗರತ್ನ ಸ್ವಾಮಿ ಪರ 29, ಕಾಂಗ್ರೆಸ್‍ನ ಸುಜಾತ ಅವರಿಗೆ 12 ಮತಗಳು ಚಲಾವಣೆಯಾಗಿ ಜೆಡಿಎಸ್‍ನ ನಾಗರತ್ನ ಸ್ವಾಮಿ ಅಧ್ಯಕ್ಷರಾಗಿ ಆಯ್ಕೆಯಾದರು.
ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರಾದ ಶಿವಯೋಗಿ ಟಿ.ಕಳಸದ ಅವರ ನೇತೃತ್ವದಲ್ಲಿ ಆಯ್ಕೆ ಪ್ರಕ್ರಿಯೆ ನಡೆದು, ಚುನಾವಣಾಧಿಕಾರಿಯಾಗಿದ್ದ ಅಪರ ಜಿಲ್ಲಾಧಿಕಾರಿ ಬಿ.ಪಿ.ವಿಜಯ್ ಅವರು ಫಲಿತಾಂಶವನ್ನು ಘೋಷಿಸಿದರು.
ಜೆ.ಪ್ರೇಮಕುಮರಿ ಅವರ 20 ತಿಂಗಳ ಅಧಿಕಾರಾವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಇಂದು ನಡೆದ ಚುನಾವಣೆಯಲ್ಲಿ ಜೆಡಿಎಸ್‍ನಿಂದ ಮದ್ದೂರು ತಾಲ್ಲೂಕಿನ ಸೋಮನಹಳ್ಳಿ ಕ್ಷೇತ್ರದ ನಾಗರತ್ನಸ್ವಾಮಿ ಹಾಗೂ ಕಾಂಗ್ರೆಸ್‍ನಿಂದ ಮಳವಳ್ಳಿ ತಾಲ್ಲೂಕು ದೊಡ್ಡಭೂಹಳ್ಳಿ ಕ್ಷೇತ್ರದ ಸುಜಾತ ಅವರು ಮಹಿಳಾ ಮೀಸಲು ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು.
ಅಭಿನಂದನೆ:
ಅಧ್ಯಕ್ಷರ ಆಯ್ಕೆಯನ್ನು ಚುನಾವಣಾಧಕಾರಿ ಘೋಷಿಸುತ್ತಿದ್ದಂತೆ ಪಕ್ಷದ ನಾಯಕರು, ಮುಖಂಡರು ನಾಗರತ್ನ ಸ್ವಾಮಿ ಅವರನ್ನು ಅಭಿನಂದಿಸಿದರು.
ವಿರೋಧ ಪಕ್ಷದ ನಾಯಕರಾದ ಹನುಮಂತ ಅವರು ಸಹ ನೂತನ ಅಧ್ಯಕ್ಷರನ್ನು ಅಭಿನಂದಿಸಿ ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳುವಂತೆ ಕೋರಿ ಶುಭ ಹಾರೈಸಿದರು.