![jds-janatadal](http://kannada.vartamitra.com/wp-content/uploads/2018/03/jds-janatadal-550x381.png)
ಬೆಂಗಳೂರು, ಮಾ.22- ಜೆಡಿಎಸ್ ಶಾಸಕರಾದ ಸಿ.ಎನ್.ಬಾಲಕೃಷ್ಣ ಮತ್ತು ಬಿ.ಬಿ.ನಿಂಗಯ್ಯ ಪರ ವಕೀಲರಾದ ವಿವೇಕ್ ಅವರು ಹೈಕೋರ್ಟ್ನ ಸಮನ್ಸ್ ಅನ್ನು ವಿಧಾನಸಭಾಧ್ಯಕ್ಷರ ಕಚೇರಿಗೆ ತಲುಪಿಸಿದರು.
ಸಭಾಧ್ಯಕ್ಷರ ಅಭಿಪ್ರಾಯವನ್ನು ಹೈಕೋರ್ಟ್ಗೆ ಸಲ್ಲಿಸಬೇಕೆಂಬ ಸಮನ್ಸ್ ಅನ್ನು ವಕೀಲ ವಿವೇಕ್ ಅವರು ವಿಧಾನಸಭೆ ಕಾರ್ಯದರ್ಶಿ ಎಸ್.ಮೂರ್ತಿ ಅವರಿಗೆ ತಲುಪಿಸಿದರು.
ಕಳೆದ ರಾಜ್ಯಸಭೆ ಚುನಾವಣೆ ವೇಳೆ ಜೆಡಿಎಸ್ ಪಕ್ಷದ ವಿಪ್ ಉಲ್ಲಂಘಿಸಿ ಮತದಾನ ಮಾಡಿದ ಏಳು ಮಂದಿ ಶಾಸಕರನ್ನು ಶಾಸಕ ಸ್ಥಾನದಿಂದ ರದ್ದುಗೊಳಿಸಬೇಕೆಂಬ ಪ್ರಕರಣ ಸಂಬಂಧ ಜೆಡಿಎಸ್ ಪರ ವಕೀಲರು ಸಮನ್ಸ್ಅನ್ನು ಸಭಾಧ್ಯಕ್ಷರ ಕಚೇರಿಗೆ ತಲುಪಿಸಿದರು.
ಹೈಕೋರ್ಟ್ಗೆ ಈ ಪ್ರಕರಣದಲ್ಲಿ ಸಭಾಧ್ಯಕ್ಷರ ಕಚೇರಿಯಿಂದ ವಕೀಲರ ಮೂಲಕ ಅಭಿಪ್ರಾಯ ತಿಳಿಸಲು ಅವಕಾಶವಿದೆ. ದೂರುದಾರರಿಂದ ಜೆಡಿಎಸ್ ಶಾಸಕರು, 7 ಮಂದಿ ಜೆಡಿಎಸ್ನ ಬಂಡಾಯ ಶಾಸಕರನ್ನು ನಾಳೆ ನಡೆಯುವ ಮತದಾನಕ್ಕೂ ಮುನ್ನವೇ ಅನರ್ಹಗೊಳಿಸುವಂತೆ ಒತ್ತಾಯಿಸಿದ್ದಾರೆ.
ಜೆಡಿಎಸ್ ಪರ ವಕೀಲರಾದ ವಿವೇಕ್ ಮಾತನಾಡಿ, ಹೈಕೋರ್ಟ್ನಿಂದ ಆದೇಶ ಪ್ರತಿ ನಮಗೆ ತಲುಪುವುದು ನಿನ್ನೆ ಸಂಜೆ 7 ಗಂಟೆಯಾಗಿತ್ತು. ಆ ಹೊತ್ತಿನಲ್ಲಿ ವಿಧಾನಸೌಧದ ಸ್ಪೀಕರ್ ಕಚೇರಿ ಮುಚ್ಚಲಾಗಿತ್ತು. ಹೀಗಾಗಿ ಇಂದು ಬೆಳಗ್ಗೆ ಬಂದು ಸಮನ್ಸ್ಅನ್ನು ಸಭಾಧ್ಯಕ್ಷರ ಕಚೇರಿಗೆ ತಲುಪಿಸಲಾಗಿದೆ. ತಮ್ಮ ಪರವಾಗಿ ವಕೀಲರನ್ನು ನಿಯೋಜಿಸುವುದಾಗಿ ಸಭಾಧ್ಯಕ್ಷರು ತಿಳಿಸಿದ್ದಾರೆ ಎಂದು ತಿಳಿಸಿದರು.