ಕೆ.ಆರ್.ಪೇಟೆ,ಮಾ.22-ನಾನು ಅಭಿವೃದ್ಧಿ ವಿಚಾರದಲ್ಲಿ ಯಾವುದೇ ರಾಜಕೀಯ ಮಾಡುವುದಿಲ್ಲ. ಒಟ್ಟಾರೆ ಜಿಲ್ಲೆಯ ಅಭಿವೃದ್ಧಿಯಾಗಬೇಕು. ಕಾವೇರಿ ನದಿ ನೀರಿನ ಸಮಸ್ಯೆಯ ವಿಚಾರವಾಗಿ ಪ್ರಧಾನಿಗಳ ಬಳಿ ಅನೇಕ ಬಾರಿ ಚರ್ಚೆ ನಡೆಸಿದ್ದೇನೆ. ಕೋರ್ಟಿನ ಹೊರಗೆ ಕಾವೇರಿ ನೀರಿನ ಸಮಸ್ಯೆಯನ್ನು ಬಗೆಹರಿಸಬೇಕು ಎಂಬುದು ನನ್ನ ನಿಲುವಾಗಿದೆ ಎಂದು ಮಾಜಿ ಸಚಿವ ಅಂಬರೀಶ್ ಹೇಳಿದರು.
ಕರ್ನಾಟಕ ನಗರ ಮೂಲ ಸೌಕರ್ಯ ಮತ್ತು ಹಣಕಾಸು ನಿಗಮದ ವತಿಯಿಂದ ಸುಮಾರು 55 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಪುರಸಭಾ ನೂತನ ಕಚೇರಿ ಮತ್ತು ವಾಣಿಜ್ಯ ಕಟ್ಟಡ ಕಾಮಗಾರಿ, ಕುಡಿಯುವ ನೀರಿನ ಯೋಜನೆ, ಒಳಚರಂಡಿ ಕಾಮಗಾರಿ ಯೋಜನೆಗಳಿಗೆ ಶಂಕುಸ್ಥಾಪನೆ ಕಾರ್ಯಕ್ರಮವನ್ನು ನೆರವೇರಿಸಿ ಮಾತನಾಡಿದರು.
ನಮ್ಮ ಸರ್ಕಾರ ಮಂಡ್ಯ ಜಿಲ್ಲೆಯ ಅಭಿವೃದ್ಧಿಗಾಗಿ 5ಸಾವಿರ ಕೋಟಿ ರೂಪಾಯಿಗಳಿಗೂ ಹೆಚ್ಚಿನ ಹಣವನ್ನು ನೀಡಿದೆ. ಕೆ.ಆರ್.ಪೇಟೆ ಪಟ್ಟಣದ ಅಭಿವೃದ್ಧಿಗಾಗಿಯೇ 150 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ. ತಾಲೂಕಿನವರೇ ಆದ ಕರ್ನಾಟಕ ನಗರ ಮೂಲ ಸೌಕರ್ಯ ಮತ್ತು ಹಣಕಾಸು ನಿಗಮದ ಅಧ್ಯಕ್ಷರಾದ ಎಂ.ಡಿ.ಕೃಷ್ಣಮೂರ್ತಿ ಅವರು ತಮ್ಮ ಹುಟ್ಟೂರಿನ ಪ್ರೀತಿಗಾಗಿ ಮುಖ್ಯಮಂತ್ರಿಗಳನ್ನು ಮನವೊಲಿಸಿ ವಿವಿಧ ಅಭಿವೃದ್ದಿಕಾಮಗಾರಿಗಳಿಗೆ 6 ಕೋಟಿ ರೂಪಾಯಿಗಳನ್ನು ಬಿಡುಗಡೆಮಾಡುವ ಮೂಲಕ ಪಟ್ಟಣದ ಅಭಿವೃದ್ದಿಗೆ ಸಾಕಷ್ಟು ನೆರವನ್ನು ನೀಡಿದ್ದಾರೆ ಇದಕ್ಕಾಗಿ ಎಂ.ಡಿ.ಕೃಷ್ಣಮೂರ್ತಿ ಮತ್ತು ಮುಖ್ಯಮಂತ್ರಿಗಳನ್ನು ನಾನು ಜಿಲ್ಲೆಯ ಪರವಾಗಿ ಅಭಿನಂದಿಸುವುದಾಗಿ ಅಂಬರೀಷ್ ಹೇಳಿದರು.
ಕರ್ನಾಟಕ ನಗರ ಮೂಲ ಸೌಕರ್ಯ ಮತ್ತು ಹಣಕಾಸು ನಿಗಮದ ಅಧ್ಯಕ್ಷರಾದ ಎಂ.ಡಿ.ಕೃಷ್ಣಮೂರ್ತಿ ಮಾತನಾಡಿ,ಪಟ್ಟಣದ ಇತಿಹಾಸದಲ್ಲಿಯೇ ಇಷ್ಟೊಂದು ಅನುದಾನವನ್ನು ಯಾವಾಗಲೂ ನೀಡಿರಲಿಲ್ಲ, ಕೇಂದ್ರದ ಮಾಜಿ ಸಚಿವರಾದ ಕೆ.ರೆಹಮಾನ್ಖಾನ್ ಅವರ ಒತ್ತಾಸೆಯ ಮೇರೆಗೆ ನಗರಾಭಿವೃದ್ಧಿ ಸಚಿವ ರೋಷನ್ಬೇಗ್ ಮತ್ತು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ವಿಶೇಷ ಅನುಧಾನವನ್ನು ಬಿಡುಗಡೆ ಮಾಡಿದ್ದಾರೆ ಅವರಿಗೆ ನಾನು ಪಟ್ಟಣದ ಜನತೆಯ ಪರವಾಗಿ ಅಭಿನಂದಿಸುವುದಾಗಿ ಕೃಷ್ಣಮೂರ್ತಿ ಹೇಳಿದರು.
ಶಾಸಕ ಕೆ.ಸಿ.ನಾರಾಯಣಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, ಎಪಿಎಂಸಿ ಅಧ್ಯಕ್ಷ ಎಂ.ಪಿ.ಲೋಕೇಶ್, ಪುರಸಭಾ ಸದಸ್ಯರಾದ ತಂಜಿಮಾಕೌಸರ್, ನವೀದ್, ಕೆ.ಗೌಸ್ಖಾನ್, ಕೆ.ಟಿ.ಚಕ್ರಪಾಣಿ, ಕೆ.ಆರ್.ಹೇಮಂತ್ಕುಮಾರ್, ಡಿ.ಪ್ರೇಮ್ಕುಮಾರ್, ಕೆ.ಬಿ.ನಂದೀಶ್, ಮನ್ಮುಲ್ ನಿರ್ದೇಶಕರಾದ ಶೀಳನೆರೆ ಅಂಬರೀಷ್, ಜಿ. ಪಂ. ಮಾಜಿ ಸದಸ್ಯರಾದ ಪಾಪೇಗೌಡ ಮತ್ತಿತರರು ಹಾಜರಿದ್ದರು.