ಬೆಂಗಳೂರು ಮಾ ೨೧: ದಿನಾಂಕ 26/03/2018ರಿಂದ ಪ್ರಾರಂಭವಾಗಬೇಕಿರುವ ಕರ್ನಾಟಕ ಪದವಿಪೂರ್ವ ಕಾಲೇಜುಗಳ ಪರೀಕ್ಷಾ ಮೌಲ್ಯಮಾಪನ ಕಾರ್ಯವನ್ನು ಬಹಿಷ್ಕಾರ ಮಾಡುವ ತೀರ್ಮಾನವನ್ನು ಕರ್ನಾಟಕ ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಶ್ರೀ ತನ್ವೀರ್ ಸೇಠ್ರವರ ಆಶ್ವಾಸನೆಯ ಮೇರೆಗೆ ರಾಜ್ಯ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಹಾಗೂ ಪ್ರಾಂಶುಪಾಲರ ಸಂಘವು ಹಿಂದಕ್ಕೆ ಪಡೆದಿರುತ್ತದೆ. ಈ ದಿನ ಶಾಸಕರ ಭವನದಲ್ಲಿ ನಡೆದ ಐದು ತಾಸುಗಳ ಸತತ ಮಾತುಕತೆಯ ಮೂಲಕ ಉಪನ್ಯಾಸಕರು ಮತ್ತು ಪ್ರಾಂಶುಪಾಲರ ಸಂಘದವರಿಗೆ ಅವರ ಬಾಕಿಯಿರುವ ವಿಶೇಷ ವೇತನ ಬಡ್ತಿ ಹಾಗೂ ವೇತನ ತಾರತಮ್ಯ ಸರಿಪಡಿಸುವ ಬೇಡಿಕೆಗಳನ್ನು ಮುಖ್ಯಮಂತ್ರಿಗಳ ಮೂಲಕ ಜಾರಿಗೊಳಿಸುವ ನಿರ್ಧಾರವನ್ನು ಮಾನ್ಯ ಶಿಕ್ಷಣ ಸಚಿವರು ನೀಡಿರುತ್ತಾರೆ.
ಶಿಕ್ಷಣ ಸಚಿವರಾದ ಶ್ರೀ ತನ್ವೀರ್ ಸೇಠ್ರವರು ಇಂದಿನ ಸಭೆಯಲ್ಲಿ ಮಾತನಾಡಿ 6ನೇ ವೇತನ ಆಯೋಗದಲ್ಲಿ ಆಗಿರುವ ಪ್ರಾಥಮಿಕ ಶಾಲಾ, ಪ್ರೌಢ ಶಾಲಾ ಹಾಗೂ ಪದವಿಪೂರ್ವ ಕಾಲೇಜುಗಳ ಶಿಕ್ಷಕರ ಮತ್ತು ಉಪನ್ಯಾಸಕರ ವೇತನ ತಾರತಮ್ಯವನ್ನು ಬಾಕಿಯಿರುವ ಮತ್ತೊಂದು ವಿಶೇಷ ವೇತನ ಬಡ್ತಿ (ಇಂಕ್ರಿಮೆಂಟ್) ನೀಡುವುದರ ಮೂಲಕ ವೇತನ ತಾರತಮ್ಯವನ್ನು ಸರಿಪಡಿಸುವ ಆಶ್ವಾಸನೆಯನ್ನು ನೀಡಿರುತ್ತಾರೆ. ಈ ಸಂಬಂಧ ಮುಖ್ಯಮಂತ್ರಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಸಚಿವರು, ವೇತನ ತಾರತಮ್ಯವನ್ನು ಸರಿಪಡಿಸುವುದರ ಜೊತೆಗೆ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರ ಎಕ್ಸ್ಗ್ರೇಶಿಯಾ ಪಾವತಿಯನ್ನು ಮೂಲವೇತನದಲ್ಲಿ ಸೇರಿಸುವ ಹಾಗೂ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರಿಗೆ ಪ್ರತ್ಯೇಕ ವೇತನ ಶ್ರೇಣಿಯನ್ನು ನಿಗಧಿಪಡಿಸುವ ಹಾಗೂ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರಾಗಿ ಪದೋನ್ನತಿ ಪಡೆದಿರುವ ಉಪನ್ಯಾಸಕರಿಗೆ ಕೂಡಲೇ ಸ್ಥಾನ ಭರ್ತಿ ಮಾಡುವ ಆಶ್ವಾಸನೆಯನ್ನು ನೀಡಿರುತ್ತಾರೆ. ಮಾನ್ಯ ಸಚಿವರು ಪ್ರಾಥಮಿಕ, ಪ್ರೌಢ ಹಾಗೂ ಪಿ.ಯು. ಕಾಲೇಜುಗಳ ಶಿಕ್ಷಕರಿಗೆ ಮತ್ತು ಉಪನ್ಯಾಸಕರಿಗೆ ಬಾಕಿಯಿರುವ ಇನ್ನೊಂದು ವಿಶೇಷ ವೇತನ ಬಡ್ತಿ ನೀಡುವ ನಿರ್ಧಾರವನ್ನು ಪ್ರಕಟಿಸಿರುವುದರಿಂದ ಹಾಗೂ ರಾಜ್ಯದ ವಿದ್ಯಾರ್ಥಿಗಳ ಮತ್ತು ಪೆÇೀಷಕರ ಭವಿಷ್ಯದ ದೃಷ್ಠಿಯಿಂದ ಉದ್ದೇಶಿತ ಪದವಿಪೂರ್ವ ಕಾಲೇಜುಗಳ ಮೌಲ್ಯಮಾಪನ ಬಹಿಷ್ಕಾರದ ನಿರ್ಧಾರವನ್ನು ಉಪನ್ಯಾಸಕರ ಮತ್ತು ಪ್ರಾಂಶುಪಾಲರ ಸಂಘವು ತೆಗೆದುಕೊಂಡಿರುತ್ತದೆ. ಇವರ ಬೇಡಿಕೆಗಳನ್ನು ಪರಿಗಣಿಸಲು ಸಂಧಾನ ನಡೆಸಿದ ಮಾನ್ಯ ಶಿಕ್ಷಣ ಸಚಿವರಿಗೆ ಹಾಗೂ ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಮೌಲ್ಯಮಾಪನ ಬಹಿಷ್ಕಾರ ಕಾರ್ಯವನ್ನು ಕೈಬಿಟ್ಟ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಮತ್ತು ಪ್ರಾಂಶುಪಾಲರ ಸಂಘಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ರಮೇಶ್ ರವರು ಹೇಳಿದರು.