ಬೆಂಗಳೂರು, ಮಾ.22-ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಗೆ ನಾಲ್ಕು ಸ್ಥಾನಗಳಿಗಾಗಿ ನಡೆಯುವ ದ್ವೈವಾರ್ಷಿಕ ಚುನಾವಣೆಯ ಮತದಾನ ನಾಳೆ ನಡೆಯಲಿದ್ದು, ನಾಳಿನ ಗೆಲುವು ಕಾಂಗ್ರೆಸ್ಗೆ ಅಥವಾ ಜೆಡಿಎಸ್ಗೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.
ವಿಧಾನಸೌಧದ ಮೊದಲ ಮಹಡಿಯ ಕೊಠಡಿ ಸಂಖ್ಯೆ 106ರಲ್ಲಿ ನಾಳೆ ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದೆ. ಮತದಾನ ಮುಗಿದ ಬಳಿಕ ಮತ ಎಣಿಕೆ ನಡೆದು ಫಲಿತಾಂಶ ಪ್ರಕಟವಾಗುವ ಸಾಧ್ಯತೆಗಳಿವೆ.
ರಾಜ್ಯಸಭೆಯ ಚುನಾವಣಾ ಕಣದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಾಗಿ ಡಾ.ಎಲ್.ಹನುಮಂತಯ್ಯ, ಸಯ್ಯದ್ ನಾಸೀರ್ ಹುಸೇನ್, ಜಿ.ಸಿ.ಚಂದ್ರಶೇಖರ್ ಸ್ಪರ್ಧಿಸಿದ್ದರೆ, ಬಿಜೆಪಿಯಿಂದ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಹಾಗೂ ಜೆಡಿಎಸ್ನಿಂದ ಬಿ.ಎಂ.ಫಾರೂಕ್ ಸ್ಪರ್ಧಿಸಿದ್ದಾರೆ.
ಬಿಜೆಪಿಯ ರಾಜೀವ್ ಚಂದ್ರಶೇಖರ್, ಕಾಂಗ್ರೆಸ್ನ ಇಬ್ಬರು ಅಭ್ಯರ್ಥಿಗಳು ಆಯ್ಕೆ ಸುಗಮವಾಗಿ ನಡೆಯುವ ಸಾಧ್ಯತೆಗಳಿವೆ. ಆದರೆ ಜೆಡಿಎಸ್ ಅಭ್ಯರ್ಥಿ ಹಾಗೂ ಕಾಂಗ್ರೆಸ್ನ ಮೂರನೇ ಅಭ್ಯರ್ಥಿ ಆಯ್ಕೆ ನಡುವೆ ಪೈಪೆÇೀಟಿ ಏರ್ಪಟ್ಟಿದೆ.
ಜೆಡಿಎಸ್ನ ಅಭ್ಯರ್ಥಿ ಬಿ.ಎಂ.ಫಾರೂಕ್ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಜಿ.ಸಿ.ಚಂದ್ರಶೇಖರ್ ನಡುವೆ ಸ್ಪರ್ಧೆ ಏರ್ಪಟ್ಟು ಈ ಇಬ್ಬರಲ್ಲಿ ಯಾರೂ ಚುನಾಯಿತರಾಗಲಿದ್ದಾರೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.
ವಿಧಾನಸಭೆಯ ಒಟ್ಟು 224 ಶಾಸಕರ ಪೈಕಿ 7 ಸ್ಥಾನಗಳು ಖಾಲಿ ಉಳಿದಿದ್ದು , 217 ಶಾಸಕರು ರಾಜ್ಯಸಭೆ ಚುನಾವಣೆಯಲ್ಲಿ ಮತದಾನ ಮಾಡುವ ಹಕ್ಕನ್ನು ಪಡೆದಿದ್ದಾರೆ. ಕಾಂಗ್ರೆಸ್ನಿಂದ 122, ಬಿಜೆಪಿಯಿಂದ 43, ಜೆಡಿಎಸ್ನ 37, ಬಿಎಸ್ಆರ್ ಕಾಂಗ್ರೆಸ್ನ 3, ಕೆಜೆಪಿ 2, ಪಕ್ಷೇತರರು 8 ಮಂದಿ ಶಾಸಕರಿದ್ದಾರೆ. ಕೆಎಂಪಿಯ ಒಬ್ಬ ಹಾಗೂ ವಿಧಾನಸಭಾಧ್ಯಕ್ಷರು ಮತ ಚಲಾಯಿಸುವ ಹಕ್ಕು ಪಡೆದಿದ್ದಾರೆ.
ರಾಜ್ಯಸಭಾ ಸದಸ್ಯರಾದ ರೆಹಮಾನ್ ಖಾನ್, ಬಸವರಾಜ್ ಪಾಟೀಲ್, ರಂಗಸಾಯೀ ರಾಮಕೃಷ್ಣ ಹಾಗೂ ರಾಜೀವ್ ಚಂದ್ರಶೇಖರ್ ಅವರು ಏ.2ರಂದು ನಿವೃತ್ತರಾಗುತ್ತಿದ್ದು , ನಿವೃತ್ತಿಯಿಂದ ತೆರವಾಗುವ ಸ್ಥಾನಗಳಿಗೆ ನಾಳೆ ಮತದಾನ ನಡೆಯಲಿದೆ.
ಚುನಾವಣಾಧಿಕಾರಿ ಒದಗಿಸುವ ನೇರಳೆ ಸ್ಕೆಚ್ ಪೆನ್ನನ್ನು ಮಾತ್ರ ಬಳಸಿ ಪ್ರಾಶಸ್ತ್ಯ ಕ್ರಮದಲ್ಲಿ( ಅಂದರೆ 1, 2) ಮತ ಚಲಾಯಿಸಬೇಕು. ಚುನಾವಣಾ ಕಣದಲ್ಲಿ ಐದು ಮಂದಿ ಅಭ್ಯರ್ಥಿಯಿದ್ದು , ಪ್ರಾಶಸ್ತ್ಯ ದ ಆಧಾರದ ಮೇಲೆ 5 ಮಂದಿಗೂ ಮತ ಚಲಾಯಿಸುವ ಅವಕಾಶವಿದೆ. ಪ್ರಾಶಸ್ತ್ಯದ ಕ್ರಮ ಹೊರತುಪಡಿಸಿ ಬೇರೆ ಯಾವುದೇ ರೀತಿಯಲ್ಲಿ ಮತ ಚಲಾಯಿಸಿದರೂ ತಿರಸ್ಕøತವಾಗುತ್ತದೆ.
ನೊಟಾ ಕೂಡ ಮತಪತ್ರದಲ್ಲಿದ್ದು , ಅಭ್ಯರ್ಥಿಗಳಿಗೆ ಮತ ಚಲಾಯಿಸಲು ಇಚ್ಛೆ ಇಲ್ಲದಿದ್ದಲ್ಲಿ ನೊಟಾ ಮುಂದೆ 1 ಎಂಬ ಅಂಕಿಯನ್ನು ನಮೂದಿಸಬಹುದು.
ರಾಜ್ಯಸಭಾ ಚುನಾವಣೆಯಲ್ಲಿ ತೆರೆದ ಮತದಾನದ ವ್ಯವಸ್ಥೆ ಇರುವುದರಿಂದ ರಾಜಕೀಯ ಪಕ್ಷಗಳ ಶಾಸಕರು ಮತ ಚಲಾಯಿಸಿದ ನಂತರ ತಮ್ಮ ತಮ್ಮ ರಾಜಕೀಯ ಪಕ್ಷಗಳ ಅಧಿಕೃತ ಏಜೆಂಟರಿಗೆ ತೋರಿಸಿ ಮತಪೆಟ್ಟಿಗೆಯಲ್ಲಿ ಹಾಕಬೇಕು. ಪಕ್ಷೇತರ ಶಾಸಕರು ಯಾವುದೇ ರಾಜಕೀಯ ಪಕ್ಷಗಳಿಗೆ ಸೇರದಿರುವುದರಿಂದ ಮತ ಚಲಾಯಿಸಿದ ನಂತರ ಯಾರಿಗೂ ತೋರಿಸದೆ ಮತಪೆಟ್ಟಿಗೆಯಲ್ಲಿ ಹಾಕಬೇಕು ಎಂಬ ಸೂಚನೆಯನ್ನು ಚುನಾವಣಾ ಅಧಿಕಾರಿಯಾಗಿರುವ ವಿಧಾನಸಭೆ ಕಾರ್ಯದರ್ಶಿ ಎಸ್.ಮೂರ್ತಿ ಸೂಚಿಸಿದ್ದಾರೆ.