ಬೇಸಿಗೆ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಲಭ್ಯವಾಗುವ ನೀರನ್ನು ಮಿತವಾಗಿ ಬಳಕೆ ಮಾಡುವ ಮೂಲಕ ನೀರಿನ ಅಭಾವ ಉಂಟಾಗದಂತೆ ನೋಡಿಕೊಳ್ಳಬೇಕೆಂದು ಮೇಯರ್ ಸಂಪತ್‍ರಾಜ್

ಬೆಂಗಳೂರು, ಮಾ.21- ಬೇಸಿಗೆ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಲಭ್ಯವಾಗುವ ನೀರನ್ನು ಮಿತವಾಗಿ ಬಳಕೆ ಮಾಡುವ ಮೂಲಕ ನೀರಿನ ಅಭಾವ ಉಂಟಾಗದಂತೆ ನೋಡಿಕೊಳ್ಳಬೇಕೆಂದು ಮೇಯರ್ ಸಂಪತ್‍ರಾಜ್ ಇಂದಿಲ್ಲಿ ಜಲಮಂಡಳಿ ಅಧಿಕಾರಿಗಳಿಗೆ ಸೂಚಿಸಿದರು.

ಉಪ ಮೇಯರ್ ಪದ್ಮಾವತಿ ನರಸಿಂಹಮೂರ್ತಿ, ಆಡಳಿತ ಪಕ್ಷದ ನಾಯಕ ಶಿವರಾಜ್ ಮತ್ತಿತರರೊಂದಿಗೆ ಬೆಂಗಳೂರು ಜಲಮಂಡಳಿ ಅಧ್ಯಕ್ಷ ತುಷಾರ್ ಗಿರಿನಾಥ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮೇಯರ್, ನಾಳೆ (ಮಾ.22) ವಿಶ್ವ ಜಲ ದಿನಾಚರಣೆ. ನೀರು ಪ್ರತಿಯೊಂದು ಜೀವಿಗೂ ಆಧಾರವಾಗಿದೆ. ಹಾಗಾಗಿ ಪ್ರತಿಯೊಬ್ಬರಿಗೂ ನೀರಿನ ಬಗ್ಗೆ ಅರಿವು ಮೂಡಿಸಬೇಕು ಎಂದು ಹೇಳಿದರು.

ಪ್ರಸಕ್ತ ನೀರಿನ ಅಭಾವ ಹೆಚ್ಚಾಗುತ್ತಿದೆ. ಹಾಗಾಗಿ ಲಭ್ಯವಾಗುವ ನೀರನ್ನು ಮಿತವಾಗಿ ಬಳಸುವ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಅಗತ್ಯವಿದೆ ಎಂದು ತಿಳಿಸಿದರು.

ನಗರದಲ್ಲಿ ಬೀಳುವ ಮಳೆ ನೀರು ವ್ಯರ್ಥವಾಗದಂತೆ ಇಂಗು ಗುಂಡಿ ತೋಡುವುದು, ತ್ಯಾಜ್ಯ ನೀರನ್ನು ಎಸ್‍ಟಿಪಿ ಮೂಲಕ ಸಂಸ್ಕರಣೆ ಮಾಡಿ ಉದ್ಯಾನವನಗಳು ಹಾಗೂ ದೈನಂದಿನ ಕೆಲಸಗಳಿಗೆ ಬಳಕೆ ಮಾಡಿಕೊಳ್ಳುವುದು, ಅಪಾರ್ಟ್‍ಮೆಂಟ್‍ಗಳಲ್ಲಿ ತ್ಯಾಜ್ಯ ನೀರು ಸಂಸ್ಕರಣಾ ಘಟಕ ಅಳವಡಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡು ಬೇಸಿಗೆ ಕಾಲದಲ್ಲಿ ನೀರಿನ ಅಭಾವ ಉಂಟಾಗದಂತೆ ಕ್ರಮ ಕೈಗೊಳ್ಳುವಂತೆ ಜಲಮಂಡಳಿ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ ಎಂದು ಹೇಳಿದರು.
ಇದೇ 24ರಂದು ಕುಡಿಯುವ ನೀರಿನ ಅಭಾವ ಕುರಿತಂತೆ ಜಲಮಂಡಳಿ ಅಧಿಕಾರಿಗಳೊಂದಿಗೆ ವಿಶೇಷ ಸಭೆ ಕರೆಯಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ತಮ್ಮ ತಮ್ಮ ವಾರ್ಡ್‍ಗಳಲ್ಲಿರುವ ನೀರಿನ ಸಮಸ್ಯೆಯನ್ನು ಜಲಮಂಡಳಿ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳಬೇಕೆಂದು ಸಂಪತ್‍ರಾಜ್ ಕರೆ ನೀಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ