ಬೆಂಗಳೂರು, ಮಾ.21-ಮಠಾಧೀಶರು, ವಿವಿಧ ರಾಜಕೀಯ ಪಕ್ಷಗಳ ಮುಖಂಡರ ವಿರೋಧದ ನಡುವೆಯೂ ಪ್ರತ್ಯೇಕ ಲಿಂಗಾಯತ ಧರ್ಮ ಮಾಡುವಂತೆ ಕೇಂದ್ರಕ್ಕೆ ಶಿಫಾರಸು ಮಾಡಿರುವುದು ಕೇವಲ ರಾಜಕೀಯ ಹಿತಾಸಕ್ತಿಗಾಗಿಯೇ?
ಕಳೆದ ಮೂರು ದಿನಗಳಿಂದ ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿರುವ ಮಾತಿದು. ಆಡಳಿತ ಶಕ್ತಿ ಕೇಂದ್ರ ವಿಧಾನಸೌಧ, ವಿವಿಧ ರಾಜಕೀಯ ಪಕ್ಷಗಳ ಕಚೇರಿಗಳು, ನ್ಯಾಯಾಲಯ ಸೇರಿದಂತೆ ಎಲ್ಲಿ ನೋಡಿದರೂ ಸದ್ಯಕ್ಕೆ ಲಿಂಗಾಯತ ಧರ್ಮದ ವಿಷಯವೇ ಚರ್ಚೆಯಾಗುತ್ತಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲಿಂಗಾಯತ ಧರ್ಮವನ್ನು ಸ್ಥಾಪನೆ ಮಾಡುವಂತೆ ಕೇಂದ್ರಕ್ಕೆ ಶಿಫಾರಸು ಮಾಡಿರುವುದನ್ನು ಕೆಲವರು ಬೆಂಬಲಿಸಿದರೆ ಇನ್ನು ಕೆಲವರು ಕಾಂಗ್ರೆಸ್ ಮೊದಲಿನಿಂದಲೂ ಹಿಂದೂ ವಿರೋಧಿ ಅನುಸರಿಸುತ್ತಿದ್ದು, ಅದರ ಮುಂದುವರೆದ ಭಾಗವಾಗಿ ಶತಮಾನಗಳ ಇತಿಹಾಸವಿರುವ ವೀರಶೈವ ಲಿಂಗಾಯತ ಧರ್ಮವನ್ನು ಇಬ್ಭಾಗ ಮಾಡಿದ್ದಾರೆ ಎಂಬ ಆಕ್ರೋಶದ ನುಡಿಗಳನ್ನು ಹೊರ ಹಾಕುತ್ತಿದ್ದಾರೆ.
ಹಾದಿಬೀದಿ, ಗಲ್ಲಿ ಗಲ್ಲಿಗಳಲ್ಲಿ ಸದ್ಯಕ್ಕೆ ನಡೆಯುತ್ತಿರುವ ಪರ ವಿರೋಧದ ಚರ್ಚೆ ನೋಡಿದರೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಭ್ರಷ್ಟಾಚಾರ, ಅಭಿವೃದ್ಧಿ , ಪ್ರಧಾನಿ ನರೇಂದ್ರ ಮೋದಿ ಅಲೆ, ಮುಖ್ಯಮಂತ್ರಿ ಸಿದ್ದರಾಮಯ್ಯ ವರ್ಚಸ್ಸು ಯಾವುದೂ ಕೂಡ ಯಾವ ಪಕ್ಷವನ್ನೂ ಕೈ ಹಿಡಿಯುವ ಲಕ್ಷಣಗಳು ಕಾಣುತ್ತಿಲ್ಲ.
ಬದಲಿಗೆ ಹೈಕೋರ್ಟ್ ನಿವೃತ್ತಿ ನ್ಯಾ.ನಾಗಮೋಹನ್ದಾಸ್ ನೇತೃತ್ವದ ತಜ್ಞರ ಸಮಿತಿ ಲಿಂಗಾಯತ ಸಮುದಾಯಕ್ಕೆ ಧಾರ್ಮಿಕ ಅಲ್ಪಸಂಖ್ಯಾತ ಸ್ಥಾನಮಾನ ನೀಡುವಂತೆ ನೀಡಿದ್ದ ವರದಿಯನ್ನು ಕೇಂದ್ರಕ್ಕೆ ಶಿಫಾರಸು ಮಾಡಿರುವ ಸರ್ಕಾರದ ಕ್ರಮಕ್ಕೆ ಎಲ್ಲೆಡೆ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ.
ಚುನಾವಣಾ ಗಿಮಿಕ್?
ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿರುವ ಹಿನ್ನಲೆಯಲ್ಲಿ ರಾಜಕೀಯ ಪಕ್ಷಗಳಿಗೆ ರಾಜಕೀಯ ಅಸ್ತ್ರವಾಗಿದ್ದ ಪ್ರತ್ಯೇಕ ಧರ್ಮ ವಿವಾದ ಕುರಿತಂತೆ ಸರ್ಕಾರ ತೆಗೆದುಕೊಂಡಿರುವ ನಿರ್ಧಾರ ಲಿಂಗಾಯತರ ಕಣ್ಣೊರೆಸುವ ತಂತ್ರವಾಗಲಿದೆಯೇ ಎಂಬ ಮಾತುಗಳು ಇದೀಗ ಕೇಳಿ ಬರತೊಡಗಿವೆ.
ಏಕೆಂದರೆ, ಸರ್ಕಾರ ಇದೀಗ ತೆಗೆದುಕೊಂಡಿರುವ ನಿರ್ಧಾರದಿಂದ ಲಿಂಗಾಯತರಿಗೆ ಅಷ್ಟು ಬೇಗ ಲಾಭಗಳು ಸಿಗುವುದಿಲ್ಲ. ಚುನಾವಣೆ ಹತ್ತಿರ ಬರುತ್ತಿರುವ ಹಿನ್ನಲೆಯಲ್ಲಿ ಇದು ಲಿಂಗಾಯತರ ಕಣ್ಣೊರೆಸುವ ತಂತ್ರವೆಂದೇ ಹೇಳಲಾಗುತ್ತಿದೆ.
ಲಿಂಗಾಯತರಿಗೆ ಧಾರ್ಮಿಕ ಅಲ್ಪಸಂಖ್ಯಾತ ಮಾನ್ಯತೆ ದೊರೆತರೂ ಮೀಸಲಾತಿ ವಿಚಾರದಲ್ಲಿ ಈಗಿರುವ ಪರಿಸ್ಥಿತಿಯೇ ಮುಂದವರೆಯಲಿದೆ ಹೊರತು ಹೆಚ್ಚಿನ ಲಾಭವೇನೂ ಆಗುವುದಿಲ್ಲ. ಬದಲಿಗೆ, ಅಲ್ಪಸಂಖ್ಯಾತ ಸ್ಥಾನಮಾನದ ಅಡಿಯಲ್ಲಿ ಶಿಕ್ಷಣ ಸಂಸ್ಥೆಗಳ ಸ್ಥಾಪನೆ ಮಾತ್ರ ವಿಶೇಷ ಅವಕಾಶ ಲಭ್ಯವಾಗಲಿದೆ.
ಪ್ರಸ್ತುತ ರಾಜ್ಯದಲ್ಲಿ ಮೀಸಲಾತಿ ವಾರು ಐದು ಪ್ರವರ್ಗಗಳಿವೆ. ಪ್ರವರ್ಗ 1 ರ ಅಡಿ 95 ಜಾತಿ ಹಾಗೂ 8 ಮುಸ್ಲಿಂ ಸಮುದಾಯಗಳು ಬರುತ್ತವೆ. 2ಎ ವರ್ಗದಲ್ಲಿ ದಲಿತ ಕ್ರೈಸ್ತರು, ಬುದ್ಧರು, ಪ್ರವರ್ಗ 2ಬಿಯಲ್ಲಿ ಮುಸ್ಲಿಮರು, ಪ್ರವರ್ಗ 3ಬಿಯಲ್ಲಿ ಕ್ರೈಸ್ತರು, ಜೈನರು, ಲಿಂಗಾಯತರು ಇತರೆ ಜಾತಿಗಳು ಬರುತ್ತಾರೆ. 3ಎನಲ್ಲಿ ಒಕ್ಕಲಿಗರು, ಕೊಡವರು ಇತರೆ ಬರುತ್ತಾರೆ.
ಪ್ರಸ್ತುತ ಲಿಂಗಾಯತರು 3-ಬಿ ಪ್ರವರ್ಗದಲ್ಲಿದ್ದು, ಅಲ್ಪಸಂಖ್ಯಾತ ಮಾನೆಯತೆಯ ಬಳಿಕವೂ ಕ್ರೈಸ್ತರು, ಜೈನರ ಜತೆಯೇ ಅಲ್ಪಸಂಖ್ಯಾತರಾಗಿ 3-ಬಿ ಪ್ರವರ್ಗದಲ್ಲಿ ಮುಂದುವರೆಯುತ್ತಾರೆ. ರಾಜ್ಯದಲ್ಲಿ ಅಲ್ಪಸಂಖ್ಯಾತ ಸಮುದಾಯಗಳೂ ಸಹ ಹಿಂದುಳಿದ ವರ್ಗಗಳ ಅಡಿಯಲ್ಲೇ ಬರುವುದರಿಂದ ಮೀಸಲಾತಿಯಲ್ಲಿ ಯಾವುದೇ ವ್ಯತ್ಯಾಸಗಳಾಗುವುದಿಲ್ಲ ಎಂದು ಹೇಳಾಲಾಗುತ್ತಿದೆ.
ಪ್ರಸ್ತುತ ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದ್ದು, ಕೇಂದ್ರಕ್ಕೆ ಶೀಘ್ರದಲ್ಲಿಯೇ ಶಿಫಾರಸು ಮಾಡುವುದಾಗಿ ತಿಳಿಸಿದೆ. ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದ್ದು, ಕೇಂದ್ರ ಸರ್ಕಾರ ಈ ಬಗ್ಗೆ ಯಾವ ರೀತಿಯ ನಿರ್ಧಾರ ಕೈಗೊಳ್ಳಲಿದೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ.
ರಾಜ್ಯ ವಿಧಾನಸಭೆಗೆ ಚುನಾವಣಾ ದಿನಾಂಕ ಪ್ರಕಟವಾಗುವುದರೊಳಗೆ ಈ ಸಂಬಂಧ ಅಧಿಸೂಚನೆ ಹೊರಡಿಸಬೇಕಾಗುತ್ತದೆ. ಆನಂತರ ವರದಿಯನ್ನು ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗಕ್ಕೆ ಕಳುಹಿಸಿಕೊಡಬೇಕಾಗುತ್ತದೆ. ಅಲ್ಲಿಗೆ ರಾಜ್ಯ ಸರ್ಕಾರದ ಜವಾಬ್ದಾರಿ ಪೂರ್ಣಗೊಳ್ಳಲಿದೆ.ಆಯೋಗವು ರಾಜ್ಯ ಸರ್ಕಾರದ ವರದಿಯನ್ನು ಕೇಂದ್ರ ಸರ್ಕಾರಕ್ಕೆ ತಲುಪಿಸಲಿದೆ.
ಆನಂತರ ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗದ ವರದಿಯು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆಯಲಿರುವ ಸಚಿವ ಸಂಪುಟಸಭೆಯ ಮುಂದೆ ಬರಲಿದೆ. ಇದಕ್ಕೂ ಮುನ್ನ, ವರದಿ ಸ್ವೀಕರಿಸಿದರೂ ಕೇಂದ್ರ ಸರ್ಕಾರವುಅದನ್ನು ಸಂಪುಟ ಸಭೆ ನಡಾವಳಿಗೆ ಸೇರಿಸಿದೆ ಕಾಲಹರಣ ಮಾಡಬಹುದು. ಆದರೆ, ಅಧಿಸೂಚನೆ ಹೊರಡಿಸಿ, ಆಯೋಗಕ್ಕೆ ವರದಿ ರವಾನಿಸಿದ ತಕ್ಷಣ ರಾಜ್ಯ ಸರ್ಕಾರವು ಸಹಜವಾಗಿ ಕೇಂದ್ರ ಸರ್ಕಾರದತ್ತ ಬೆಟ್ಟು ಮಾಡಲಾರಂಭಿಸುತ್ತದೆ.
ಲಿಂಗಾಯತ ಸ್ವತಂತ್ರ ಧರ್ಮ ಪರ ಹೋರಾಟಗಾರರು ರಾಜ್ಯದ ಬಿಜೆಪಿ ನಾಯಕರ ಮೇಲೆ ಒತ್ತಡ ಹಾಕಲಾರಂಭಿಸುತ್ತಾರೆ.ಚುನಾವಣೆಗೆ ಕೆಲವೇ ತಿಂಗಳಿರುವುದರಿಂದ ಬಿಜೆಪಿ ವರದಿಯನ್ನು ಒಪ್ಪಿಕೊಂಡರೂ ಕಷ್ಟ, ಒಪ್ಪಿಕೊಳ್ಳದೆ ಇದ್ದರೂ ಕಷ್ಟವಾಗಲಿದ್ದು, ಧರ್ಮದ ಅಡಕತ್ತರಿಗೆ ಸಿಲುಕಿಕೊಳ್ಳಲಿದೆ.
ಇದು ಬಿಜೆಪಿಗೆ ಲಿಂಗಾಯತ ವಿರೋಧಿ ಎಂಬ ಹಣಪಟ್ಟಿಯನ್ನು ಕಟ್ಟಬಹುದು. ರಾಜ್ಯ ಸರ್ಕಾರದ ವರದಿಯನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡಿದ್ದೇ ಆದಲ್ಲಿ ಅದು ರಾಷ್ಟ್ರಪತಿಗಳ ಅಂಕಿತಕ್ಕೆ ರವಾನೆಯಾಗಲಿದೆ. ರಾಷ್ಟ್ರಪತಿಗಳು ವರದಿಗೆ ಅಧಿಕೃತ ಮುದ್ರೆ ಒತ್ತಲಿದ್ದಾರೆ.