ತುಮಕೂರು, ಮಾ.21- ಯುಗಾದಿ ಹಬ್ಬದ ಪ್ರಯುಕ್ತ ನಗರದ ಜನತೆಗೆ ಶುಭ ಕೋರುವ ನೆಪದಲ್ಲಿ ಜೆಡಿಎಸ್ನವರು ಬೆಳ್ಳಿ ಕಪ್ಪುಗಳನ್ನು ಆಮಿಷವಾಗಿ ನೀಡಿದ್ದಾರೆ ಎಂದು ಆರೋಪಿಸಿ ಸ್ಥಳಕ್ಕೆ ಬಂದ ಬಿಜೆಪಿ ಕಾರ್ಯಕರ್ತರು ಅವರನ್ನು ತಡೆದು ಪ್ರತಿಭಟಿಸಿದ್ದರಿಂದ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ.
ನಡು ರಸ್ತೆಯಲ್ಲೇ ರಾತ್ರಿ ಬಡಿದಾಡಿಕೊಳ್ಳುತ್ತಿದ್ದುದನ್ನು ನೋಡುತ್ತಿದ್ದ ಸಾರ್ವಜನಿಕರು ತಕ್ಷಣ ಆತಂಕಗೊಂಡು ಪೆÇಲೀಸರಿಗೆ ಮಾಹಿತಿ ನೀಡಿದ್ದಾರೆ.
ಕೂಡಲೇ ತಿಲಕ್ಪಾರ್ಕ್ ಠಾಣೆಯ ವೃತ್ತ ನಿರೀಕ್ಷಕ ರಾಧಾಕೃಷ್ಣ ಮತ್ತು ಸಿಬ್ಬಂದಿ ದೌಡಾಯಿಸಿ ಎರಡೂ ಪಕ್ಷದವರೊಂದಿಗೆ ಮಾತುಕತೆ ನಡೆಸಿ ಪರಿಸ್ಥಿತಿಯನ್ನು ಹತೋಟಿಗೆ ತರುವಲ್ಲಿ ಯಶಸ್ವಿಯಾದರು.
ಕಳೆದ ಎರಡು-ಮೂರು ತಿಂಗಳುಗಳಿಂದ ಮತದಾರರನ್ನು ಜೆಡಿಎಸ್ ಪಕ್ಷದ ಅಭ್ಯರ್ಥಿ ವಿವಿಧ ದೇವಾಲಯಗಳಿಗೆ ಕರೆದೊಯ್ದು ಆಣೆ, ಪ್ರಮಾಣ ಮಾಡಿಸುವುದು ಸೀರೆ ಬಟ್ಟೆ , ಹಣ ನೀಡಿ ಆಮಿಷ ಒಡ್ಡುತ್ತಿದ್ದಾರೆ ಎಂದು ಬಿಜೆಪಿ ಹಾಗೂ ಕಾಂಗ್ರೆಸ್ನವರು ಚುನಾವಣಾ ಅಧಿಕಾರಿಗಳು , ಪೆÇಲೀಸ್ ಅಧಿಕಾರಿಗಳಿಗೆ ದೂರು ನೀಡಿದ್ದರು.
ಹಬ್ಬದ ಹಿಂದಿನ ರಾತ್ರಿ ಎನ್ಇಪಿಎಸ್ ಠಾಣೆ ವ್ಯಾಪ್ತಿಯ ಹುತ್ತ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ತಿಗಳರ ಪಾಳ್ಯದಲ್ಲಿ ಯುಗಾದಿ ಶುಭಾಶಯ ಕೋರುವ ನೆಪದಲ್ಲಿ ಕೆಲವರು ಜನರಿಗೆ ಉಡುಗೊರೆ ನೀಡುತ್ತಿದ್ದರು.
ಇದೇ ವೇಳೆ ಕೆಲ ಬಿಜೆಪಿ ಮುಖಂಡರು, ಕಾರ್ಯಕರ್ತರು ಸಹ ಸ್ಥಳೀಯರಿಗೆ ಶುಭಾಶಯ ಹೇಳಿ ಬೇವು-ಬೆಲ್ಲ ಹಂಚುತ್ತಿದ್ದರು. ರಾತ್ರಿ 10 ಗಂಟೆ ಸುಮಾರಿಗೆ ಎರಡು ಪಕ್ಷದ ಕಾರ್ಯಕರ್ತರು ಎದುರು ಬದುರಾದಾಗ ಪರಸ್ಪರ ಆರೋಪಗಳನ್ನು ಮಾಡಿ ಘೋಷಣೆಗಳನ್ನು ಕೂಗಿದ್ದಾರೆ.
ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಪರಸ್ಪರ ಕೈ ಕೈ ಮಿಲಾಯಿಸಿದ್ದಾರೆ ಎಂದು ಹೇಳಲಾಗಿದೆ.
ದೂರು ಪ್ರತಿದೂರು ದಾಖಲಾಗಿದ್ದು , ಕೆಲ ಮುಖಂಡರ ವಾಹನಗಳನ್ನು ಕೂಡ ವಶಕ್ಕೆ ಪಡೆಯಲಾಗಿದೆ. ಚುನಾವಣೆ ಘೋಷಣೆಗೂ ಮುನ್ನವೇ ಮತದಾರರನ್ನು ಓಲೈಸಲು ಸಾಕಷ್ಟು ಕಸರತ್ತು ನಡೆಸಲಾಗುತ್ತಿದೆ.ಇದು ಕಾರ್ಯಕರ್ತರ ನಡುವೆ ಸಂಘರ್ಷಕ್ಕೂ ಕಾರಣವಾಗಿದೆ.