![588339-jayalalithaa-sasikala-pti](http://kannada.vartamitra.com/wp-content/uploads/2018/03/588339-jayalalithaa-sasikala-pti-667x381.jpg)
ಚೆನ್ನೈ/ನವದೆಹಲಿ, ಮಾ.21-ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಸಾವು ಪ್ರಕರಣ ಹಲವಾರು ಊಹಾಪೆÇೀಹಾಗಳು ಗೊಂದಲದ ಗೂಡನ್ನು ಸೃಷ್ಟಿಸಿರುವ ಮಧ್ಯೆ ಹೊಸ ಸಂಗತಿಯೊಂದು ವರದಿಯಾಗಿದೆ. ಪ್ರಜ್ಞಾಶೂನ್ಯರಾಗಿದ್ದ ಎಐಎಡಿಎಂಕೆ ಪರಮೋಚ್ಚ ನಾಯಕಿಗೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯುವಾಗ ಅವರಿಗೆ ಪ್ರಜ್ಞೆ ಮರುಕಳಿಸುತ್ತು ಎಂಬ ವಿಷಯವನ್ನು ಜಯಾರ ಪರಮಾಪ್ತೆ ವಿ.ಕೆ.ಶಶಿಕಲಾ ನಟರಾಜನ್ ಇದೀಗ ಬಹಿರಂಗಗೊಳಿಸಿರುವುದು ಚರ್ಚೆಗೆ ಎಡೆ ಮಾಡಿಕೊಟ್ಟಿದೆ.
ಜಯಾ ಅವರು 2016ರ ಸೆಪ್ಟೆಂಬರ್ 22ರಂದು ಚೆನ್ನೈನ ಪೆÇೀಯಸ್ ಗಾರ್ಡನ್ನಲ್ಲಿರುವ ತಮ್ಮ ಬಂಗಲೆಯ ಮೊದಲ ಮಹಡಿಯ ಶೌಚಾಲಯದಲ್ಲಿ ಕುಸಿದುಬಿದ್ದು, ಪ್ರಜ್ಞಾಶೂನ್ಯರಾದರು. ಅವರಿಗೆ ತುರ್ತು ಚಿಕಿತ್ಸೆ ನೀಡಲು ಅಂಬ್ಯುಲೆನ್ಸ್ನಲ್ಲಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಜಯಾರಿಗೆ ಪ್ರಜ್ಞೆ ಮರಳಿತು. ನನ್ನನ್ನು ಎಲ್ಲಿಗೆ ಕರೆದೊಯ್ಯುತ್ತಿದ್ದೀರಿ ಎಂದು ಪ್ರಶ್ನಿಸಿದರು. ಆಸ್ಪತ್ರೆಗೆ ಸೇರಲು ಅವರು ನಿರಾಕರಿಸಿದ್ದರು ಎಂಬ ಸಂಗತಿಯನ್ನು ಶಶಿಕಲಾ ಇದೀಗ ಬಹಿರಂಗಗೊಳಿಸಿದ್ದಾರೆ.
ತಮಿಳುನಾಡು ಮಾಜಿ ಮುಖ್ಯಮಂತ್ರಿ ಸಾವಿನ ಕುರಿತು ತನಿಖೆ ನಡೆಸುತ್ತಿರುವ ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ಎ. ಆರ್ಮುಗಸ್ವಾಮಿ ಅವರ ಮುಂದೆ ಚಿನ್ನಮ್ಮ ನೀಡಿರುವ ಹೇಳಿಕೆ ಈಗ ಚರ್ಚೆಗೆ ಗ್ರಾಸವಾಗಿದೆ. ಇಷ್ಟು ದಿನ ಈ ವಿಷಯವನ್ನು ಶಶಿಕಲಾ ಏಕೆ ಬಹಿರಂಗಗೊಳಿಸಲಿಲ್ಲ. ತಡವಾಗಿ ಈ ಸಂಗತಿಯನ್ನು ತಿಳಿಸುವ ಉದ್ದೇಶವಾದರೂ ಏನು ಎಂಬಿತ್ಯಾದಿ ಪ್ರಶ್ನೆಗಳು ಈಗ ಗಿರಕಿ ಹೊಡೆಯುತ್ತಿವೆ.
ಜಯಲಲಿತಾ ಅವರು ಚೆನ್ನೈನ ಅಪೆÇೀಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಅವರ ಆರೋಗ್ಯದ ಬಗ್ಗೆ ನಾಲ್ಕು ಬಾರಿ ವೀಡಿಯೋ ಚಿತ್ರೀಕರಣ ಮಾಡಲಾಗಿತ್ತು. ಓ. ಪನ್ನೀರ್ ಸೆಲ್ವಂ ಮತ್ತು ಎಂ. ತಂಬಿದುರೈ ಸೇರಿದಂತೆ ಎಐಎಡಿಎಂಕೆ ಹಿರಿಯ ನಾಯಕರು ಜಯಾರನ್ನು ಭೇಟಿಯಾಗಿದ್ದರು. ಆದರೆ ಅವರು ಆಸ್ಪತ್ರೆಯಲ್ಲಿದ್ದ ಮೂರು ತಿಂಗಳ ಅವಧಿಯಲ್ಲಿ ತಾವು ಭೇಟಿಯಾಗಲು ಅವಕಾಶ ನೀಡಲಿಲ್ಲ ಎಂದು ಸುಳ್ಳು ಹೇಳಿದ್ದಾರೆ ಎಂದು ಶಶಿಕಲಾ ತನಿಖಾ ಘಟಕದ ಮುಂದೆ ಹೇಳಿಕೆ ನೀಡಿದ್ದಾರೆ.
ಜಯಾರ ಆರೋಗ್ಯ ಮತ್ತು ಚಿಕಿತ್ಸೆ ಕುರಿತ ಗೊಂದಲಗಳ ನಡುವೆಯೂ ನ್ಯಾಯಮೂರ್ತಿ ಎ. ಆರ್ಮುಗಸ್ವಾಮಿ ಅವರಿಗೆ ಇದಕ್ಕೆ ಸಂಬಂಧಪಟ್ಟ ದಾಖಲೆಪತ್ರಗಳು ಸಲ್ಲಿಕೆಯಾಗಿವೆ.
ಸೆಪ್ಟೆಂಬರ್ 22, 2016ರಂದು ಬೆಳಗ್ಗೆಯಿಂದಲೇ ಜಯಾಲಲಿತಾ ಅಸೌಖ್ಯರಾಗಿದ್ದರು, ಅವರಲ್ಲಿ ಅನಾರೋಗ್ಯದ ಲಕ್ಷಣಗಳು ಗೋಚರಿಸುತ್ತಿತ್ತು. ಶೌಚಾಲಯದಲ್ಲಿ ಕುಸಿದು ಬಿದ್ದಾಗ ಅರೆ ಪ್ರಜ್ಞಾವಸ್ಥೆಯನ್ನು ಸಹಾಯಕ್ಕಾಗಿ ನನ್ನನ್ನು ಕರೆದರು. ನಾನು ಕೂಡಲೇ ನೆರವಿಗೆ ಧಾವಿಸಿ ಆಸ್ಪತ್ರೆಗೆ ಹೋಗೋಣ ಎಂದು ಸಲಹೆ ಮಾಡಿದೆ. ಆಕೆ ನಿರಾಕರಿಸಿ ಪೂರ್ಣ ಪ್ರಜ್ಞಾಶೂನ್ಯರಾದರು. ನಾನು ವೈದ್ಯರು ಮತ್ತು ಆಂಬ್ಯುಲೆನ್ಸ್ಗೆ ಕರೆ ಮಾಡಿದೆ. ಆಸ್ಪತ್ರೆಗೆ ತೆರಳುವ ಮಾರ್ಗದಲ್ಲಿ ಅವರಿಗೆ ಮತ್ತೆ ಪ್ರಜ್ಞೆ ಮರುಕಳಿಸಿತ್ತು ಎಂದು ತನಿಖಾ ಘಟಕದ ಮುಂದೆ ಶಶಿಕಲಾ ಮಾಹಿತಿ ನೀಡಿದ್ದಾರೆ.
ಮೂರು ತಿಂಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಜಯಲಲಿತಾ ಡಿಸೆಂಬರ್ 5ರಂದು ನಿಧನರಾಗಿ ತಮ್ಮ ಸಾವಿನ ಬಗ್ಗೆ ದೊಡ್ಡ ಪ್ರಶ್ನೆಯನ್ನು ಹುಟ್ಟುಹಾಕಿದರು.
ಅಕ್ರಮ ಸಂಪತ್ತು ಗಳಿಕೆ ಪ್ರಕರಣದಲ್ಲಿ ಎಐಎಡಿಎಂಕೆ ಮಾಜಿ ನಾಯಕಿ ಹಾಗೂ ಜಯಲಲಿತಾ ಪರಮಾಪ್ತೆ ವಿ.ಕೆ.ಶಶಿಕಲಾ ನಟರಾಜನ್ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ತಮ್ಮ ಪತಿ ಎಂ.ನಟರಾಜನ್ ನಿಧನರಾದ ಹಿನ್ನೆಲೆಯಲ್ಲಿ ಪ್ರಸ್ತುತ ಅವರು 15 ದಿನಗಳ ಪೆರೋಲ್ನಲ್ಲಿದ್ದಾರೆ.