ಬೆಂಗಳೂರು, ಮಾ.21- ಯುವ ಉದ್ಯಮಿ ವಿದ್ವತ್ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಈಗಾಗಲೇ ನ್ಯಾಯಾಂಗ ಬಂಧನದಲ್ಲಿರುವ ಶಾಸಕ ಎನ್.ಎ.ಹ್ಯಾರಿಸ್ ಅವರ ಪುತ್ರ ಮಹಮ್ಮದ್ ನಲ್ಪಾಡ್ಗೆ ಏ.4ರ ವರೆಗೆ ಪರಪ್ಪನ ಅಗ್ರಹಾರ ಜೈಲೇ ಗತಿಯಾಗಿದೆ.
ಬೆಂಗಳೂರಿನ 1ನೆ ಎಸಿಎಂಎಂ ನ್ಯಾಯಾಲಯ ನಲ್ಪಾಡ್ ನ್ಯಾಯಾಂಗ ಬಂಧನ ಅವಧಿಯನ್ನು ಏ.4ರ ವರೆಗೆ ಇಂದು ವಿಸ್ತರಿಸಿದೆ.
ಜೈಲಿನಲ್ಲಿರುವ ನಲ್ಪಾಡ್ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ದು ವಿಶೇಷವಾಗಿತ್ತು. ಭದ್ರತಾ ಕಾರಣಗಳಿಂದಾಗಿ ಪರಪ್ಪನ ಅಗ್ರಹಾರ ಜೈಲಿನಿಂದಲೇ ನಲ್ಪಾಡ್ ವಿಚಾರಣೆ ನಡೆಸಲಾಗಿತ್ತು.
ಈ ಪ್ರಕರಣ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯ ಈ ಆದೇಶ ನೀಡಿದೆ. ಹಲ್ಲೆ ನಡೆದು ಇಂದಿಗೆ ಸರಿಯಾಗಿ ಒಂದು ತಿಂಗಳು ಕಳೆದಿದೆ. ಎಷ್ಟೇ ಪ್ರಭಾವಿಯಾಗಿರಲಿ, ಹಣಬಲವಿರಲಿ ನಲ್ಪಾಡ್ಗೆ ಜಾಮೀನು ಸಿಕ್ಕಿಲ್ಲ.
ಆರೋಪಿಗೆ ಜಾಮೀನು ದೊರೆತು ಬಿಡುಗಡೆಯಾದರೆ ಸಾಕ್ಷ್ಯಾಧಾರವನ್ನು ತಿರುಚುವ ಸಾಧ್ಯತೆ ಇದೆ ಎಂಬ ಕಾರಣಕ್ಕಾಗಿ ಇದುವರೆಗೂ ಜಾಮೀನು ನೀಡಿಲ್ಲ. ಕಳೆದ ಬಾರಿ ವಿಚಾರಣೆ ವೇಳೆ ಕೋರ್ಟ್ ಆವರಣದಲ್ಲೇ ನಲ್ಪಾಡ್ ಪೆÇಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದ್ದರಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.