ಬೆಂಗಳೂರು, ಮಾ.21- ಗ್ಲೆನ್ ಈಗಲ್ಸ್ ಗ್ಲೋಬಲ್ ಹಾಸ್ಪಿಟಲ್ಸ್ ಬಹು ಆರೋಗ್ಯ ತೊಂದರೆ ಅನುಭವಿಸುತ್ತಿದ್ದ ರೋಗಿಯೊಬ್ಬರಿಗೆ ಬ್ಯಾರಿಯಾಟ್ರಿಕ್ ಸರ್ಜರಿಯನ್ನು ಯಶಸ್ವಿಯಾಗಿ ಪೂರೈಸಿ ಹೊಸ ಸಾಧನೆ ಮಾಡಿದೆ.
ಸುಮಾರು 200 ಕೆಜಿ ತೂಕ ಮತ್ತು ಹೈ ಬಾಡಿ ಮಾಸ್ ಇಂಡೆಕ್ಸ್ (ಬಿಎಂಐ) 87.2 ಹೊಂದಿದ್ದ ಮುಯೀದ್ ಅಹ್ಮದ್ (35 ವರ್ಷ) ಅವರು 2017 ರ ಡಿಸೆಂಬರ್ನಲ್ಲಿ ಚಿಕಿತ್ಸೆಗಾಗಿ ಬೆಂಗಳೂರಿನ ರಿಚ್ಮಂಡ್ ರಸ್ತೆಯಲ್ಲಿರುವ ಗ್ಲೆನ್ಈಗಲ್ಸ್ ಆಸ್ಪತ್ರೆಗೆ ಬಂದಿದ್ದರು. ಅವರನ್ನು ತಪಾಸಣೆ ಮಾಡಿದಾಗ ಮೆಟಾಬಾಲಿಕ್ ಸಿಂಡ್ರೋಮ್ನಿಂದ ಬಳಲುತ್ತಿರುವುದು ಪತ್ತೆಯಾಯಿತು.
ಅವರಿಗೆ ನಿದ್ದೆಯ ಸಂದರ್ಭದಲ್ಲಿ ಉಸಿರುಕಟ್ಟುವುದು, ಸ್ವಲ್ಪ ದೂರ ನಡೆಯುತ್ತಿದ್ದಂತೆಯೇ ಉಸಿರಾಟದಲ್ಲಿ ತೊಂದರೆ ಕಾಣಿಸಿಕೊಳ್ಳುವುದು, ಮಂಡಿ ಮತ್ತು ಬೆನ್ನು ನೋವು ನಿರಂತರವಾಗಿ ಕಾಡುತ್ತಿದ್ದುದು, ಮೂತ್ರಕೋಶದಲ್ಲಿ ಕಲ್ಲುಗಳು ಉತ್ಪತ್ತಿಯಾಗುವುದು ಸೇರಿದಂತೆ ಹಲವು ಸಮಸ್ಯೆಗಳಿಂದ ನರಳುತ್ತಿದ್ದರು. ಎರಡೂ ಕಾಲುಗಳಲ್ಲಿ ಭಾರೀ ಪ್ರಮಾಣದಲ್ಲಿ ನೋವು ಕಾಣಿಸಿಕೊಳ್ಳುತ್ತಿತ್ತು. ಇದರ ಪರಿಣಾಮ ದೈನಂದಿನ ಚಟುವಟಿಕೆಗಳು ತುಂಬಾ ಸವಾಲಿನಿಂದ ಕೂಡಿದ್ದವು.
ಈ ಹಿನ್ನೆಲೆಯಲ್ಲಿ ಮುಯೀದ್ ಅಹ್ಮದ್ ಅವರಿಗೆ ಸಮಗ್ರವಾಗಿ ಕಾರ್ಡಿಯೋ ಪಲ್ಮೊನರಿ ಅವಲೋಕನ ಮತ್ತು ಎಂಡೋಕ್ರೈನ್ ಅನ್ನು ಕೈಗೊಳ್ಳಲಾಯಿತು. ಈ ಎಲ್ಲಾ ತಪಾಸಣೆ ನಡೆಸಿದ ನಂತರ ಶಸ್ತ್ರಚಿಕಿತ್ಸೆ ನಡೆಸಲು ನಿರ್ಧರಿಸಲಾಯಿತು.
ಶಸ್ತ್ರಚಿಕಿತ್ಸೆ ನಡೆಸಿದ ನಂತರದ ಮೂರು ತಿಂಗಳಲ್ಲಿ ಮುಯೀದ್ ಅವರ ತೂಕ 30 ಕೆಜಿಯಷ್ಟು ಇಳಿಕೆಯಾಗಿದೆ. ಈ ವರ್ಷಾಂತ್ಯದ ವೇಳೆಗೆ ಇನ್ನೂ 70 ಕೆಜಿಯಷ್ಟು ತೂಕ ಇಳಿಕೆಯಾಗುವ ನಿರೀಕ್ಷೆ ಇದೆ. ರೋಗಿಯ ಆರೋಗ್ಯ ದಿನದಿಂದ ದಿನಕ್ಕೆ ಗಣನೀಯ ಪ್ರಮಾಣದಲ್ಲಿ ಸುಧಾರಣೆಯಾಗುತ್ತಿದೆ. ಅವರು ಈಗ ಯಾವುದೇ ಉಸಿರಾಟದ ತೊಂದರೆ ಇಲ್ಲದೇ ಸ್ವತಂತ್ರವಾಗಿ ನಡೆಯಬಲ್ಲರು ಮತ್ತು ಮೆಟ್ಟಿಲುಗಳನ್ನು ಸುಲಭವಾಗಿ ಹತ್ತಬಲ್ಲವರಾಗಿದ್ದಾರೆ. ಕಾಲಿನಲ್ಲಿ ಆಗುತ್ತಿದ್ದ ಊತದ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುತ್ತಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ನುರಿತ ವೈದ್ಯ ಮೊಯಿನುದ್ದೀನ್ ತಿಳಿಸಿದರು.