ಬೆಂಗಳೂರು, ಮಾ.21-ತನ್ನ ಮತ ಬುಟ್ಟಿಗೆ ಕೈ ಹಾಕಿರುವ ಕಾಂಗ್ರೆಸ್ನ ಅಸ್ತ್ರಕ್ಕೆ ಪ್ರತ್ಯಸ್ತ್ರ ಬಳಸಲು ಮುಂದಾಗಿರುವ ಬಿಜೆಪಿ ಬರಲಿರುವ ವಿಧಾನಸಭೆ ಚುನಾವಣೆಯಲ್ಲಿ ಹಿಂದೂ ವಿರೋಧಿ ಕಾಂಗ್ರೆಸ್ ಎಂಬುದನ್ನೇ ಮತದಾರರಿಗೆ ಮನವರಿಕೆ ಮಾಡಿಕೊಡಲು ಮುಂದಾಗಿದೆ.
ಪ್ರತ್ಯೇಕ ಲಿಂಗಾಯತ ಧರ್ಮ ಸ್ಥಾಪನೆ ಸಂಬಂಧ ನಿವೃತ್ತ ನ್ಯಾ.ನಾಗಮೋಹನ್ದಾಸ್ ನೇತೃತ್ವದ ತಜ್ಞರ ಸಮಿತಿ ನೀಡಿದ್ದ ವರದಿಯನ್ನು ಸೋಮವಾರ ರಾಜ್ಯಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ಮುಂದಾಗಿದೆ.
ಈವರೆಗೂ ಬಿಜೆಪಿಯ ಸಾಂಪ್ರದಾಯಿಕ ಮತಗಳೆನಿಸಿದ್ದ ವೀರಶೈವ ಲಿಂಗಾಯತ ಮತಗಳು ಪಕ್ಷದಿಂದ ದೂರ ಸರಿಯಬಹುದೆಂಬ ಆತಂಕ ಎದುರಾಗಿದೆ. ಇದೀಗ ಕಾಂಗ್ರೆಸ್ನ ಲಿಂಗಾಯತ ಅಸ್ತ್ರಕ್ಕೆ ಆರ್ಎಸ್ಎಸ್ ನಾಯಕರು ತನ್ನದೇ ಆದ ಕಾರ್ಯಸೂಚಿಯನ್ನು ರೂಪಿಸಿದ್ದಾರೆ.
ಈ ಪ್ರಕಾರ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದೂ ವಿರೋಧಿಗಳು ಹಾಗೂ ಹಿಂದೂ ಧರ್ಮವನ್ನು ಇಬ್ಭಾಗ ಮಾಡಲು ಮುಂದಾಗಿದ್ದಾರೆ ಎಂಬುದನ್ನು ಜನತೆಗೆ ಮನವರಿಕೆ ಮಾಡುವಂತೆ ಆರ್ಎಸ್ಎಸ್ ಚಿಂತಕರ ಚಾವಡಿ ಸಲಹೆ ನೀಡಿದೆ.
ಸಿದ್ದರಾಮಯ್ಯನವರು ಯಾವಾಗಲೂ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಯಾಗುವ ರೀತಿಯಲ್ಲಿ ನಡೆದುಕೊಂಡಿದ್ದಾರೆ. ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಮೀನು ತಿಂದು ದೇವರ ದರ್ಶನ ಮಾಡಿದ್ದು, ಎಐಸಿಸಿ ಅಧ್ಯಕ್ಷ ರಾಹುಲ್ಗಾಂಧಿ ಕರಾವಳಿ ಜಿಲ್ಲೆಗಳಿಗೆ ಭೇಟಿ ನೀಡಿದ ವೇಳೆ ಹಿಂದೂಗಳ ಪವಿತ್ರ ಧಾರ್ಮಿಕ ಕೇಂದ್ರವಾದ ಉಡುಪಿ ಶ್ರೀಕೃಷ್ಣನ ಮಠಕ್ಕೆ ಭೇಟಿ ನೀಡದಿರುವುದು, ಹಿಂದೂ ಮಠಗಳನ್ನು ಧಾರ್ಮಿಕ ದತ್ತಿ ಇಲಾಖೆ ಮೂಲಕ ವಶಕ್ಕೆ ಪಡೆಯಲು ಮುಂದಾಗಿದ್ದು, ಹಿಂದೂ ಕಾರ್ಯಕರ್ತರ ಹತ್ಯೆ, ಮೂಲಭೂತ ಸಂಘಟನೆಗಳಾದ ಎಸ್ಡಿಪಿಐ, ಪಿಎಫ್ಐ ಬೇರೂರಲು ಕುಮ್ಮಕ್ಕು ಸೇರಿದಂತೆ ಹಲವು ಹಿಂದೂ ವಿರೋಧಿ ನೀತಿಗಳನ್ನೇ ಹೆಚ್ಚು ಬಿಂಬಿಸುವಂತೆ ಬಿಜೆಪಿ ನಾಯಕರಿಗೆ ಸೂಚಿಸಲಾಗಿದೆ.
ಈಗಾಗಲೇ ರಾಜ್ಯ ಸರ್ಕಾರ ತೆಗೆದುಕೊಂಡಿರುವ ನಿರ್ಧಾರಕ್ಕೆ ನಾಡಿನ ಕೆಲವು ಮಠಾಧೀಶರು, ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶ್ಯಾಮನೂರು ಶಿವಶಂಕರಪ್ಪ ಸೇರಿದಂತೆ ಅನೇಕರು ವಿರೋಧ ವ್ಯಕ್ತಪಡಿಸಿದ್ದಾರೆ.
23 ರಂದು ಬೆಂಗಳೂರಿನಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಅಂತಿಮ ನಿರ್ಧಾರವನ್ನು ಪ್ರಕಟಿಸಲಿದೆ. ಈ ನಿಲುವನ್ನು ನೋಡಿಕೊಂಡು ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ಹಿಂದೂ ವಿರೋಧಿಗಳು ಎಂಬುದನ್ನೇ ಹೆಚ್ಚು ಮನವರಿಕೆ ಮಾಡಿಕೊಡುವ ಅಭಿಪ್ರಾಯ ವ್ಯಕ್ತವಾಗಿದೆ.
ಸರ್ಕಾರದ ಕ್ರಮಕ್ಕೆ ಯಾವುದೇ ಕಾರಣಕ್ಕೂ ಬಿಜೆಪಿ ನಾಯಕರು ಮಾತನಾಡಬಾರದು, ಅಖಿಲ ಭಾರತ ವೀರಶೈವ ಮಹಾಸಭಾ ಹಾಗೂ ವೀರಶೈವ ಲಿಂಗಾಯತ ಸಮುದಾಯದ ನಡೆದಾಡುವ ದೇವರೆಂದೇ ಭಕ್ತರು ಕರೆಯುವ ತುಮಕೂರು ಸಿದ್ದಗಂಗಾ ಮಠದ ಡಾ.ಶ್ರೀ ಶಿವಕುಮಾರಸ್ವಾಮೀಜಿಯವರ ನಿಲುವು ನೋಡಿಕೊಂಡು ಪಕ್ಷ ತನ್ನ ಮುಂದಿನ ತೀರ್ಮಾನವನ್ನು ತಿಳಿಸಬೇಕು ಎಂದು ಕೇಂದ್ರ ಬಿಜೆಪಿ ನಾಯಕರು ನಿರ್ದೇಶಿಸಿದ್ದಾರೆ.
ಈ ವಿಷಯದಲ್ಲಿ ಯಡಿಯೂರಪ್ಪ ಹೊರತುಪಡಿಸಿ ಬೇರೊಬ್ಬರು ಮಾತನಾಡುವ ಅಗತ್ಯವಿಲ್ಲ. ಪಕ್ಷದ ಹಿರಿಯ ನಾಯಕರಾದ ಅವರು ಮಾತ್ರ ಪ್ರತಿಕ್ರಿಯಿಸುವುದು ಸೂಕ್ತ. ಗೊಂದಲ ಸೃಷ್ಟಿಸುವ ಅಗತ್ಯವಿಲ್ಲ ಎಂಬ ನೀತಿಪಾಠ ಹೇಳಲಾಗಿದೆ.
ಕಾಂಗ್ರೆಸ್ನ ದ್ವಂದ್ವ: ಇನ್ನು ಯಾವುದೇ ಸಂದರ್ಭದಲ್ಲೂ ರಾಜ್ಯ ವಿಧಾನಸಭೆ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ದಿನಾಂಕ ನಿಗದಿಪಡಿಸುವ ಸಾಧ್ಯತೆ ಇದೆ. ಈ ಹಿಂದೆ 2013ರಲ್ಲಿ ಅಂದಿನ ಪ್ರಧಾನಿಯಾಗಿದ್ದ ಡಾ.ಮನ್ಮೋಹನ್ಸಿಂಗ್ ಅವರಿಗೆ ಲಿಂಗಾಯತ ಸಮುದಾಯಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡುವಂತೆ ರಾಜ್ಯಸರ್ಕಾರ ಶಿಫಾರಸು ಮಾಡಿತ್ತು.
ಕೆಲವು ತಾಂತ್ರಿಕ ಕಾರಣಗಳನ್ನು ಮುಂದಿಟ್ಟುಕೊಂಡು ಅಂದಿನ ಗೃಹ ಸಚಿವ ಸುಶೀಲ್ಕುಮಾರ್ ಸಿಂಧೆ ಹಾಗೂ ಹಣಕಾಸು ಸಚಿವ ಪಿ.ಚಿದಂಬರಂ ರಾಜ್ಯಸರ್ಕಾರದ ಬೇಡಿಕೆ ತಿರಸ್ಕರಿಸಿದ್ದರು.
ಅಲ್ಲದೆ, ಲಿಂಗಾಯತ ಸಮುದಾಯ ಹಿಂದೂ ಧರ್ಮದ ಒಂದು ಅವಿಭಾಜ್ಯ ಅಂಗ ಎಂದು ಅಂದು ಯುಪಿಎ ಅಧ್ಯಕ್ಷರಾಗಿದ್ದ ಸೋನಿಯಾಗಾಂಧಿ ಹೇಳಿದ್ದರು. ಅವರ ಸರ್ಕಾರ ತಿರಸ್ಕರಿಸಿದ್ದನ್ನು ನಾವು ಮಾನ್ಯ ಮಾಡಲು ಹೇಗೆ ಸಾಧ್ಯ. ಕಾಂಗ್ರೆಸ್ನ ಈ ದ್ವಂದ್ವ ನೀತಿಯನ್ನು ಜನರ ಮುಂದೆ ಎಳೆ ಎಳೆಯಾಗಿ ಬಿಡಿಸಿಡುವಂತೆ ಕೇಂದ್ರ ನಾಯಕರು ಸೂಚಿಸಿದ್ದಾರೆ.
ಇನ್ನೇನು ಚುನಾವಣಾ ಪ್ರಚಾರಕ್ಕೆ ಧುಮುಕಲಿರುವ ಬಿಜೆಪಿ ನಾಯಕರು, ಲಿಂಗಾಯತ ಅಸ್ತ್ರವನ್ನೇ ಮುಂದಿಟ್ಟುಕೊಂಡು ಕಾಂಗ್ರೆಸ್ ಬಗ್ಗುಬಡಿಯಲು ಸಜ್ಜಾಗುತ್ತಿದ್ದಾರೆ.