ವೈದ್ಯಕೀಯ ವಿದ್ಯಾರ್ಥಿಗಳಿಗೆ ವಂಚನೆ, ಉತ್ತರ ಪತ್ರಿಕೆ ಪೂರೈಕೆ :

ಮೀರತ್, ಮಾ.21-ಮಧ್ಯಪ್ರದೇಶವನ್ನು ತಲ್ಲಣಗೊಳಿಸಿದ್ದ ವ್ಯಾಪಕ ಅಕ್ರಮ ನೇಮಕಾತಿ ಮತ್ತು ಭ್ರಷ್ಟಾಚಾರಗಳ ವ್ಯಾಪಂ(ವ್ಯವಸಾಯಿಕ್ ಪರೀP್ಷÁ ಮಂಡಲ್) ಹಗರಣವನ್ನೇ ಹೋಲುವ ದೊಡ್ಡ ಮಟ್ಟದ ವಂಚನೆ ಮಾಫಿಯಾ ಉತ್ತರ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ.
ವೈದ್ಯಕೀಯ ವಿದ್ಯಾರ್ಥಿಗಳಿಗೆ ವಂಚನೆ, ಉತ್ತರ ಪತ್ರಿಕೆ ಪೂರೈಕೆ ಮತ್ತು 600ಕ್ಕೂ ಹೆಚ್ಚು ನಕಲಿ ವೈದ್ಯರನ್ನು ಸೃಷ್ಟಿಸಿದ ವ್ಯವಸ್ಥಿತ ಜಾಲವೊಂದನ್ನು ಪೆÇಲೀಸರು ಪತ್ತೆ ಹಚ್ಚಿದ್ದು, ಈ ಸಂಬಂಧ ಕೆಲವರನ್ನು ಬಂಧಿಸಿದ್ದಾರೆ. ಈ ಗ್ಯಾಂಗ್‍ನಲ್ಲಿ ಮೀರತ್‍ನ ಚೌಧರಿ ಚರಣ್ ಸಿಂಗ್ ವಿಶ್ವವಿದ್ಯಾಲಯದ ಆರು ಅಧಿಕಾರಿಗಳೂ ಶಾಮೀಲಾಗಿದ್ದು, ತನಿಖೆ ತೀವ್ರಗೊಂಡಿದೆ.
ಉತ್ತರ ಪ್ರದೇಶದ ವ್ಯಾಪಂ ಹಗರಣವೆಂದೇ ಬಿಂಬಿತವಾಗಿರುವ ಈ ದಂಧೆ ಸಂಬಂಧ ಮುಜಾಫರ್‍ನಗರ್ ಮೆಡಿಕಲ್ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳನ್ನು ಪೆÇಲೀಸರು ಬಲೆಗೆ ಕಡೆವಿಕೊಂಡ ನಂತರ ಅಕ್ರಮ-ಅವ್ಯವಹಾರಗಳ ದೊಡ್ಡ ಕರ್ಮಕಾಂಡ ಬೆಳಕಿಗೆ ಬಂದಿತು. ಇವರಲ್ಲಿ ಒಬ್ಬ ಪ್ರತಿಷ್ಠಿತ ಆಸ್ಪತ್ರೆಯೊಂದರಲ್ಲಿ ಹಿರಿಯ ವೈದ್ಯರ ಪುತ್ರ. ಈತನ ಹೆಸರು ಆಯುಷ್ ಕುಮಾರ್ (21). ಮತ್ತೊಬ್ಬ ಮೆಡಿಕಲ್ ವಿದ್ಯಾರ್ಥಿ ಸ್ವರ್ಣಜೀತ್ ಸಿಂಗ್. ಇವರು ಗ್ಯಾಂಗ್‍ನೊಂದಿಗೆ ಶಾಮೀಲಾಗಿ ಹಲವು ವರ್ಷಗಳಿಂದ ಈ ದಂಧೆಯಲ್ಲಿ ತೊಡಗಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.
ಈ ವ್ಯವಸ್ಥಿತ ಜಾಲವು ಪರೀಕ್ಷೆಯಲ್ಲಿ ತೇರ್ಗಡೆಯಾಗಲು ತಲಾ ಒಬ್ಬ ವಿದ್ಯಾರ್ಥಿಯಿಂದ 1.50 ಲಕ್ಷ ರೂ.ಗಳನ್ನು ಪಡೆಯುತ್ತಿತ್ತು. ವಿದ್ಯಾರ್ಥಿಗಳ ಪರವಾಗಿ ತಜ್ಞರಿಂದ ಉತ್ತರಗಳನ್ನು ಬರೆಸಿ ಮೌಲ್ಯಮಾಪನಕ್ಕೆ ರವಾನಿಸುತ್ತಿತ್ತು. ಕಳೆದ ನಾಲ್ಕು ವರ್ಷಗಳಿಂದಲೂ ಅಕ್ರಮ-ಅವ್ಯವಹಾರಗಳು ಅವ್ಯಾಹತವಾಗಿ ಮುಂದುವರಿದಿದೆ. 2014ರಿಂದ ಈವರೆಗೆ 600ಕ್ಕೂ ಹೆಚ್ಚು ಅನರ್ಹ ವಿದ್ಯಾರ್ಥಿಗಳು ಎಂಬಿಬಿಎಸ್ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ನಕಲಿ ವೈದ್ಯರಾಗಿದ್ದಾರೆ. ಅವರನ್ನು ಪತ್ತೆ ಮಾಡುವ ಕಾರ್ಯ ಚುರುಕುಗೊಂಡಿದೆ.
ಈ ದಂಧೆಯಲ್ಲಿ ಮೀರತ್‍ನ ಚೌಧರಿ ಚರಣ್ ಸಿಂಗ್ ವಿಶ್ವವಿದ್ಯಾಲಯದ ಆರು ಅಧಿಕಾರಿಗಳೂ ಶಾಮೀಲಾಗಿದ್ದು, ಮತ್ತಷ್ಟು ಮಂದಿ ಪೆÇಲೀಸ್ ಬಲೆಗೆ ಬೀಳಲಿದ್ದಾರೆ.
ಕೆಲವು ವಿದ್ಯಾರ್ಥಿಗಳಿಂದ ಹಣ ಪಡೆದು ವಂಚಿಸಿರುವ ಪ್ರಕರಣಗಳೂ ವರದಿಯಾಗಿವೆ. ಈ ಗ್ಯಾಂಗ್ ನಡೆಸಿರುವ ಮತ್ತಷ್ಟು ಅಕ್ರಮಗಳನ್ನು ಪತ್ತೆ ಮಾಡುವ ಕಾರ್ಯ ಬಿರುಸಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ