ಬೆಂಗಳೂರು ಮಾ.21- ದೀನ-ದಲಿತರಿಗೆ ಮೋಸ ಮಾಡುವುದು ಕಾಂಗ್ರೆಸ್ ಪಕ್ಷ. ಆ ಪಕ್ಷದ ಬಗ್ಗೆ ಎಚ್ಚರಿಕೆ ವಹಿಸಿ ಎಂದು ಪೌರ ಕಾರ್ಮಿಕರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ಕರೆ ನೀಡಿದರು.
ಪುರಭವನದಲ್ಲಿ ಪೌರ ಕಾರ್ಮಿಕರ ಸಮುದಾಯ ವೇದಿಕೆ ಹಮ್ಮಿಕೊಂಡಿದ್ದ ಪೌರ ಕಾರ್ಮಿಕರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ದೀನ-ದಲಿತರಿಗೆ ಮೋಸ ಮಾಡಿಕೊಂಡೇ ಬಂದಿದೆ. ಇಂತಹ ಪಕ್ಷವನ್ನು ಯಾರೂ ನಂಬಬಾರದು ಎಂದರು.
ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಬಿಬಿಎಂಪಿಯಲ್ಲಿ ದುಡಿಯುತ್ತಿರುವ 20 ಸಾವಿರಕ್ಕೂ ಹೆಚ್ಚು ಹೊರಗುತ್ತಿಗೆ ಪೌರ ಕಾರ್ಮಿಕರನ್ನು ಖಾಯಂ ಮಾಡಲಾಗುವುದು ಎಂದು ಭರವಸೆ ನೀಡಿದರು.
ಕೆಲಸದಲ್ಲಿ ಯಾವುದೇ ಮೇಲು-ಕೀಳು ಎಂಬುದಿಲ್ಲ. ತಮ್ಮ ಆರೋಗ್ಯ ಬದಿಗಿಟ್ಟು ನಗರದ ಶುಚಿತ್ವ ಕಾರ್ಯವನ್ನು ಪೌರ ಕಾರ್ಮಿಕರು ಮಾಡುತ್ತಿದ್ದಾರೆ. ಇಂತಹವರ ಎಲ್ಲ ಬೇಡಿಕೆ ಈಡೇರಿಸುವುದು ಸರ್ಕಾರದ ಕರ್ತವ್ಯ ಎಂದು ಹೇಳಿದರು.
ದೀನ-ದಲಿತರ ನಾಯಕ ಅಂಬೇಡ್ಕರ್ ಅವರನ್ನು ಸೋಲಿಸಿದ ಕೀರ್ತಿ ಕಾಂಗ್ರೆಸ್ ಪಕ್ಷದವರದ್ದು. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಎಲ್ಲ ತಾರತಮ್ಯ ಬದಿಗೊತ್ತುತ್ತೇವೆ ಎಂದು ಹೇಳಿದರು.
ಪೌರ ಕಾರ್ಮಿಕರ ನೆನಪಿಗಾಗಿ ಬಿಬಿಎಂಪಿಯಲ್ಲಿ ಐಪಿಡಿ ಸಾಲಪ್ಪನವರ ಪ್ರತಿಮೆ ಸ್ಥಾಪಿಸಿದ್ದುದು ನಮ್ಮ ಅವಧಿಯಲ್ಲೇ. ಬಡವರ, ದೀನ-ದಲಿತರ ಪಕ್ಷ ಬಿಜೆಪಿ. ಇನ್ನು ಒಂದೂವರೆ ತಿಂಗಳು ಸುಮ್ಮನಿರಿ. ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದೇ ಬರುತ್ತದೆ. ಆಗ ನಿಮ್ಮ ಆಶಯಗಳನ್ನು ಈಡೇರಿಸುತ್ತೇವೆ ಎಂದು ಭರವಸೆ ನೀಡಿದರು.
ಬಿಜೆಪಿ ವಕ್ತಾರ ಎನ್.ಆರ್.ರಮೇಶ್, ಎಸ್ಸಿ/ಎಸ್ಟಿ ಮೋರ್ಚಾ ಅಧ್ಯಕ್ಷ ಚಿ.ನಾ.ರಾಮು, ಲಹರಿ ಸಂಸ್ಥೆ ಮುಖ್ಯಸ್ಥ ಲಹರಿ ವೇಲು, ವೇದಿಕೆ ಅಧ್ಯಕ್ಷ ಸುಬ್ಬರಾಯುಡು ಉಪಸ್ಥಿತರಿದ್ದರು.