ಬೆಂಗಳೂರು, ಮಾ.21- ತಳವಾರ ಹಾಗೂ ಪರಿವಾರ ಸಮುದಾಯಕ್ಕೆ ಪರಿಶಿಷ್ಟ ಪಂಗಡ(ಎಸ್ಟಿ) ಮಾನ್ಯತೆ ನೀಡಲು ಕೇಂದ್ರ ಸರ್ಕಾರ ಒಪ್ಪಿಕೊಂಡಿದ್ದು, ಶೀಘ್ರದಲ್ಲೇ ಅಧಿಸೂಚನೆ ಹೊರ ಬೀಳಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಕಳೆದ ಒಂದು ಶತಮಾನದಿಂದ ತಲವಾರ ಹಾಗೂ ಪರಿವಾರ ಸಮುದಾಯಕ್ಕೆ ಎಸ್ಟಿ ಮಾನ್ಯತೆ ನೀಡಬೇಕೆಂಬ ಬೇಡಿಕೆ ಕೇಳಿ ಬಂದಿತ್ತು. ಪ್ರಸ್ತುತ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈ ಎರಡೂ ಸಮುದಾಯಗಳನ್ನು ಎಸ್ಟಿಗೆ ಸೇರ್ಪಡೆ ಮಾಡಲು ತೆಗೆದುಕೊಂಡಿರುವ ತೀರ್ಮಾನ ಅತ್ಯಂತ ಸೂಕ್ತ ಎಂದು ಅವರು ಸಂತಸ ವ್ಯಕ್ತಪಡಿಸಿದರು.
ಪಕ್ಷದ ಕಚೇರಿಯಲ್ಲಿ ಶಾಸಕ ಪಾಟೀಲ್ ನಡಹಳ್ಳಿ, ಮಾಜಿ ಶಾಸಕ ಗಂಗಹನುಮಯ್ಯ, ಮಾಜಿ ಸಚಿವ ವೆಂಕಟರಮಣಪ್ಪ ಪುತ್ರ ಕುಮಾರಸ್ವಾಮಿ ಮತ್ತಿತರರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡ ನಂತರ ಅವರು ಮಾತನಾಡಿದರು.
ಕೆಲ ದಿನಗಳ ಹಿಂದೆ ಕೇಂದ್ರ ಗೃಹ ಸಚಿವ ರಾಜನಾಥ್‍ಸಿಂಗ್ ಅವರನ್ನು ಭೇಟಿ ಮಾಡಿ ತಳವಾರ ಹಾಗೂ ಪರಿವಾರ ಸಮುದಾಯವನ್ನು ಎಸ್ಟಿಗೆ ಸೇರ್ಪಡೆ ಮಾಡಬೇಕೆಂದು ಕೋರಲಾಗಿತ್ತು. ಈಗಾಗಲೇ ಕೇಂದ್ರ ಸರ್ಕಾರ ಇದಕ್ಕೆ ಒಪ್ಪಿಗೆ ಸೂಚಿಸಿದ್ದು, ಮುಂದಿನ ಕೇಂದ್ರದ ಸಚಿವ ಸಂಪುಟ ಸಭೆಯಲ್ಲಿ ಘೋಷಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಇದರಿಂದ ಈ ಎರಡೂ ಸಮುದಾಯಗಳಿಗೆ ಹೆಚ್ಚಿನ ಸವಲತ್ತುಗಳು ದೊರೆಯಲಿವೆ ಎಂದು ಹೇಳಿದರು.
ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ:
ಕೇಂದ್ರ ಸರ್ಕಾರ ಎಲ್ಲಾ ಸಮುದಾಯಗಳನ್ನು ಒಗ್ಗೂಡಿಸಲು ಪ್ರಯತ್ನಿಸುತ್ತಿದ್ದರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಎಂತಹ ಕೀಳುಮಟ್ಟಕ್ಕೆ ಇಳಿದಿದ್ದಾರೆ ಎಂಬುದಕ್ಕೆ ಲಿಂಗಾಯತ ಸಮುದಾಯವನ್ನು ಪ್ರತ್ಯೇಕ ಧರ್ಮ ಮಾಡಬೇಕೆಂದು ಕೇಂದ್ರಕ್ಕೆ ಶಿಫಾರಸು ಮಾಡುವ ತೀರ್ಮಾನ ಕೈಗೊಂಡಿರುವುದೇ ಸಾಕ್ಷಿಯಾಗಿದೆ ಎಂದು ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ಜಾತಿ ಮತ್ತು ಧರ್ಮಗಳ ನಡುವೆ ಬೆಂಕಿ ಹಚ್ಚುವ ಹೀನ ಕೃತ್ಯಕ್ಕೆ ಕೈ ಹಾಕಿದ್ದಾರೆ. ಬರಲಿರುವ ವಿಧಾನಸಭೆ ಚುನಾವಣೆಯಲ್ಲಿ ಇದು ಅವರಿಗೆ ತಿರುಗುಬಾಣವಾಗಲಿದೆ ಎಂದು ಯಡಿಯೂರಪ್ಪ ಎಚ್ಚರಿಕೆ ನೀಡಿದರು.
ಈ ಹಿಂದೆ ಕೇಂದ್ರದಲ್ಲಿ ಇದ್ದ ಯುಪಿಎ ಸರ್ಕಾರ ಲಿಂಗಾಯತ ಸಮುದಾಯಕ್ಕೆ ಪ್ರತ್ಯೇಕ ಧರ್ಮ ರಚನೆ ಮಾಡುವ ಸಂಬಂಧ ರಾಜ್ಯ ಸರ್ಕಾರದ ಪ್ರಸ್ತಾವನೆಯನ್ನು ತಿರಸ್ಕರಿಸಿತ್ತು. ಅಂದು ತಿರಸ್ಕಾರವಾಗಿದ್ದನ್ನು ಇಂದು ಒಪ್ಪಿಕೊಳ್ಳಲು ಹೇಗೆ ಸಾಧ್ಯ ಎಂದು ಅವರು ಪ್ರಶ್ನಿಸಿದರು.
ಈ ವಿಷಯದಲ್ಲಿ ನಮ್ಮ ಪಕ್ಷ ಯಾವುದೇ ವಿವಾದ ಸೃಷ್ಟಿಸಲು ಮುಂದಾಗುತ್ತಿಲ್ಲ. ಅಖಿಲ ಭಾರತ ವೀರಶೈವ ಮಹಾಸಭಾ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ. ಮಹಾಸಭಾದ ಅಧ್ಯಕ್ಷ ಶ್ಯಾಮನೂರು ಶಿವಶಂಕರಪ್ಪ ಈಗಾಗಲೇ ವಿರೋಧ ವ್ಯಕ್ತಪಡಿಸಿದ್ದಾರೆ. ಇದೇ 23ರಂದು ನಡೆಯಲಿರುವ ಸಭೆವರೆಗೂ ಕಾದು ನೋಡಲಿದ್ದೇವೆ ಎಂದು ಹೇಳಿದರು.
ರಾಹುಲ್ ಕಾಲಿಟ್ಟಕಡೆ ಸೋಲು:
ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಕರ್ನಾಟಕಕ್ಕೆ ಬಂದು ಪ್ರಚಾರ ಮಾಡುವುದರಿಂದ ನಮಗೆ ಯಾವುದೇ ಸಮಸ್ಯೆ ಇಲ್ಲ. ಏಕೆಂದರೆ ಅವರು ಎಲ್ಲೆಲ್ಲಿ ಹೋಗಿ ಪ್ರಚಾರ ಮಾಡುತ್ತಾರೋ ಅಲ್ಲಿ ಕಾಂಗ್ರೆಸ್ ಸೋತು ಬಿಜೆಪಿ ಗೆದ್ದಿದೆ ಎಂದು ವ್ಯಂಗ್ಯವಾಡಿದರು.
ಪ್ರಸ್ತುತ ಕರ್ನಾಟಕದಲ್ಲೂ ಕಾಂಗ್ರೆಸ್‍ಗೆ ಸೋಲು ಕಟ್ಟಿಟ್ಟ ಬುತ್ತಿ. ಆದ್ದರಿಂದಲೇ ಹತಾಶರಾಗಿ ಆ ಪಕ್ಷದ ಮುಖಂಡರು ಮೋದಿ ಹಾಗೂ ಬಿಜೆಪಿ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಚುನಾವಣಾ ಸಂದರ್ಭದಲ್ಲಿ ನಿಮ್ಮ ದುರಹಂಕಾರಕ್ಕೆ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.
ದೇಶದಲ್ಲಿ ಬಿಜೆಪಿ 21 ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿದೆ, ಸಬ್‍ಕಾ ಸಾಥ್, ಸಬ್ ಕಾ ವಿಕಾಸ್ ಎಂಬುದು ನಮ್ಮ ಗುರಿ. ಕರ್ನಾಟಕದಲ್ಲಿ ಕಾಂಗ್ರೆಸ್ ಮುಕ್ತಗೊಳಿಸುವುದೇ ನಮ್ಮ ಶಪಥ ಎಂದು ಹೇಳಿದರು.
ಕಾದು ನೋಡಿ:
ಇದೇ ವೇಳೆ ಯಡಿಯೂರಪ್ಪ ಕಾಂಗ್ರೆಸ್‍ನ ಪ್ರಭಾವಿ ನಾಯಕರು ಶೀಘ್ರದಲ್ಲೇ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂದು ಹೇಳುವ ಮೂಲಕ ಕುತೂಹಲ ಮೂಡಿಸಿದರು.
ಈ ವೇಳೆ ಮಾಧ್ಯಮದವರು ಯಾರು ಯಾರು ಎಂದು ಮುಗಿಬಿದ್ದಾಗ. ನೀವು ಊಹಿಸಲೂ ಸಾಧ್ಯವಿಲ್ಲ. ಅಂತಹವರೊಬ್ಬರು ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಲಿದ್ದಾರೆ. ಮಾಧ್ಯಮದವರನ್ನು ಬಿಟ್ಟು ಏನೂ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.
ನಾನು ಜೆಡಿಎಸ್ ಸದಸ್ಯನಾಗಿರಲಿಲ್ಲ:
ಇದೇ ವೇಳೆ ಬಿಜೆಪಿಗೆ ಸೇರ್ಪಡೆಯಾದ ಎ.ಎಸ್.ಪಾಟೀಲ್ ನಡಹಳ್ಳಿ ಮಾತನಾಡಿ, ನಾನು ಜೆಡಿಎಸ್ ಪಕ್ಷದ ಸದಸ್ಯನೇ ಆಗಿರಲಿಲ್ಲ. ಕಾಂಗ್ರೆಸ್ ಬಿಟ್ಟು ಜೆಡಿಎಸ್ ಸೇರಿದ್ದು ನಿಜ. ಕುಮಾರಸ್ವಾಮಿಯವರೊಂದಿಗೆ ಪಕ್ಷ ಸಂಘಟಿಸಲು ಮುಂದಾಗಿದ್ದೆ. ಆದರೆ, ಟಿಕೆಟ್ ಹಂಚಿಕೆಯಲ್ಲಿ ನನ್ನನ್ನು ಕಡೆಗಣಿಸಿದ್ದರಿಂದ ಜೆಡಿಎಸ್ ಬಿಡಬೇಕಾಯಿತು ಎಂದು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡರು.
ದೇವರಹಿಪ್ಪರಗಿ ಕ್ಷೇತ್ರ ನನಗೆ ತಾಯಿ ಇದ್ದಂತೆ. ಎರಡು ಬಾರಿ ಅಲ್ಲಿಂದ ಆಯ್ಕೆಯಾಗಿದ್ದೇನೆ. ನನ್ನ ನಿರ್ಧಾರವನ್ನು ಕ್ಷೇತ್ರದ ಜನತೆ ಒಪ್ಪಿಕೊಳ್ಳಲಿದ್ದಾರೆ. ಅಪ್ಪ-ಮಗ, ಅಣ್ಣ-ತಮ್ಮ ಸ್ಪರ್ಧೆ ಮಾಡುವುದಾದರೆ ಗಂಡ-ಹೆಂಡತಿ ಸ್ಪರ್ಧೆ ಮಾಡುವುದು ಸರಿ ಎನಿಸಿದರೆ ನನ್ನ ಪತ್ನಿ ಏಕೆ ಸ್ಪರ್ಧಿಸಬಾರದು ಎಂದು ನಡಹಳ್ಳಿ ಪ್ರಶ್ನಿಸಿದರು.