ನವದೆಹಲಿ, ಮಾ.20-ವಿಶ್ವದ ಅತ್ಯಂತ ಭಯಾನಕ ಉಗ್ರಗಾಮಿ ಸಂಘಟನೆ ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರಗಾಮಿಗಳಿಂದ ಇರಾಕ್ನ ಮೊಸುಲ್ ನಗರದಿಂದ ಕಳೆದ 3 ವರ್ಷಗಳ ಹಿಂದೆ ಅಪಹೃತರಾಗಿದ್ದ 39 ಭಾರತೀಯರು ಹತ್ಯೆಯಾಗಿರುವುದು ದೃಢಪಟ್ಟಿದ್ದು, ಅವರ ಮೃತದೇಹಗಳು ಪತ್ತೆಯಾಗಿವೆ.
ರಾಜ್ಯಸಭೆಯಲ್ಲಿಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಈ ಬಗ್ಗೆ ಸ್ವಯಂಪ್ರೇರಿತ ಹೇಳಿಕೆ ನೀಡಿದ್ದಾರೆ.
2014ರಲ್ಲಿ ಪಂಜಾಬ್ನ ಕೂಲಿ ಕಾರ್ಮಿಕರು ಉದ್ಯೋಗ ಅರಸಿ ಇರಾಕ್ನ ಅತಿ ದೊಡ್ಡ ಪಟ್ಟಣ ಮೊಸುಲ್ಗೆ ತೆರಳಿದ್ದರು. 2015ರ ಜೂನ್ನಲ್ಲಿ ಆ ಪಟ್ಟಣದಲ್ಲಿ ಭುಗಿಲೆದ್ದ ಹಿಂಸಾಚಾರ ಮತ್ತು ಸಂಘರ್ಷದ ವೇಳೆ ಐಎಸ್ ಉಗ್ರರು ಒಟ್ಟು 40 ಮಂದಿ ಕಾರ್ಮಿಕರು ಅಪಹರಿಸಿದ್ದರು. ಇವರಲ್ಲಿ ಒಬ್ಬ ಕಾರ್ಮಿಕ ಬಾಂಗ್ಲಾದೇಶದ ಮುಸ್ಲಿಂನಂತೆ ವೇಷಧರಿಸಿ ತಪ್ಪಿಸಿಕೊಂಡ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
39 ಅಪಹೃತ ಭಾರತೀಯರನ್ನು ಉಗ್ರಗಾಮಿಗಳು ಬದೂಷ್ ಪ್ರದೇಶಕೆhಕ ಕರೆದೊಯ್ದು ಹತ್ಯೆ ಮಾಡಿದ್ದಾರೆ ಎಂಬುದು ದೃಢಪಟ್ಟಿದೆ.
ಆ ಪ್ರದೇಶದಲ್ಲಿ ಶೋಧ ನಡೆಸಿದ ಸಂದರ್ಭದಲ್ಲಿ ಐಎಸ್ ಉಗ್ರರಿಂದ ಹೂಳಲಾಗಿದ್ದ ಕೆಲವು ಶವಗಳು ಪತ್ತೆಯಾಗಿದ್ದವು. ರೆಡಾರ್ನಿಂದ ಸಮೂಹ ಸಮಾಧಿಗಳು ಗೋಚರಿಸಿದವು. ಇವು ಭಾರತೀಯ ಕಾರ್ಮಿಕರೆಂಬುದು ದೃಢಪಟ್ಟಿದೆ ಎಂದು ಸುಷ್ಮಾಸ್ವರಾಜ್ ತಿಳಿಸಿದ್ದಾರೆ.
ಸಮಾಧಿ ಬಳಿ ಪತ್ತೆಯಾಗಿರುವ ಶವಗಳ ಮೂಳೆಗಳು, ಕೂದಲು, ಪಾದರಕ್ಷೆಗಳು ಮತ್ತು ಗುರುತಿನ ಚೀಟಿಗಳನ್ನು ಡಿಎನ್ಎ ಪರೀಕ್ಷೆಗಾಗಿ ಇರಾಕ್ ರಾಜಧಾನಿ ಬಾಗ್ದಾದ್ಗೆ ಕಳುಹಿಸಲಾಗಿದೆ. ಭಾರತೀಯರ ಅಸ್ಥಿಪಂಜರಗಳನ್ನು ರವಾನಿಸುವಂತೆ ಇರಾಕ್ನ ತಮ್ಮ ಸಹವರ್ತಿಗೆ ಮನವಿ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.
ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವ ವಿ.ಕೆ.ಸಿಂಗ್ ವಿಶೇಷ ವಿಮಾನದಲ್ಲಿ ಇರಾಕ್ಗೆ ತೆರಳಿ ಭಾರತೀಯರ ಅಸ್ಥಿಪಂಜರಗಳನ್ನು ಸ್ವದೇಶಕ್ಕೆ ತರಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.