ಬೆಂಗಳೂರು ,ಮಾ.20-ವೀರಶೈವ-ಲಿಂಗಾಯತ ಸಮುದಾಯಕ್ಕೆ ಪ್ರತ್ಯೇಕ ಅಲ್ಪಸಂಖ್ಯಾತ ಸ್ಥಾನಮಾನ ಕಲ್ಪಿಸಲು ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದ ತಜ್ಞರ ಸಮಿತಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿರುವ ಹಿನ್ನೆಲೆಯಲ್ಲಿ ಪಕ್ಷಕ್ಕೆ ಉಂಟಾಗಬಹುದಾದ ಲಾಭ ನಷ್ಟಗಳ ಕುರಿತು ಬಿಜೆಪಿ ನಾಯಕರು ಇಂದು ಸಭೆ ನಡೆಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಡಾಲರ್ಸ್ ಕಾಲೋನಿ ನಿವಾಸದಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಸಹ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಪಕ್ಷದ ಮುಖಂಡ ಅರುಣ್ ಕುಮಾರ್ ಮತ್ತಿತರರು ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದ್ದಾರೆ.
ಸಭೆಯಲ್ಲಿ ಮುಖ್ಯವಾಗಿ ನಿನ್ನೆ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡಿರುವ ತೀರ್ಮಾನಗಳು, ಕೇಂದ್ರ ಸರ್ಕಾರ ಯಾವ ಹೆಜ್ಜೆ ಇಡಲಿದೆ. ವಿಧಾನಸಭೆ ಚುನಾವಣೆಯಲ್ಲಿ ಇದು ಪಕ್ಷಕ್ಕೆ ಹಿನ್ನಡೆಯಾಗಲಿದೆಯೇ ಇಲ್ಲವೇ ಕಾಂಗ್ರೆಸ್‍ಗೆ ತಿರುಗು ಬಾಣವಾಗಲಿದೆಯೇ ಎಂಬುದರ ಬಗ್ಗೆ ಗಹನ ಚರ್ಚೆ ನಡೆಸಲಾಯಿತು.
ಪ್ರತ್ಯೇಕ ಲಿಂಗಾಯಿತ ಧರ್ಮದ ವಿಚಾರದಲ್ಲಿ ಬಿಜೆಪಿ ಈವರೆಗೂ ಕಾಯ್ದುಕೊಂಡು ಬಂದಿರುವ ಅಂತರವನ್ನೇ ಮುಂದೆಯೂ ಕಾಯ್ದುಕೊಳ್ಳಬೇಕು, ಯಾರೊಬ್ಬರೂ ಯಾವುದೇ ರೀತಿಯ ಹೇಳಿಕೆ ನೀಡದೇ ತಟಸ್ಥ ನಿಲುವಿಗೆ ಬರಬೇಕೆಂಬ ತೀರ್ಮಾನವನ್ನು ಸಹ ಕೈಗೊಳ್ಳಲಾಗಿದೆ.
ಅಖಿಲ ಭಾರತ ವೀರಶೈವ ಮಹಾಸಭಾ ಹಾಗೂ ತುಮಕೂರಿನ ಸಿದ್ದಗಂಗಾ ಮಠದ ಡಾ.ಶ್ರೀ ಶಿವಕುಮಾರಸ್ವಾಮೀಜಿಗಳು ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧರಾಗಿರಬೇಕೆಂಬ ಒಂದು ಸಾಲಿನ ತೀರ್ಮಾನಕ್ಕೆ ಬರಲಾಗಿದೆ.
ಲಿಂಗಾಯಿತ ಸಮುದಾಯಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡುವುದು ಕೇವಲ ರಾಜಕೀಯ ಉದ್ದೇಶಕ್ಕೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಜಾತಿ ಮತ್ತು ಧರ್ಮಗಳ ನಡುವೆ ಕಂದಕವನ್ನು ಸೃಷ್ಟಿಸಿದ್ದಾರೆ. ಚುನಾವಣಾ ಸಂದರ್ಭದಲ್ಲಿ ಇದನ್ನೇ ಜನರಿಗೆ ಮನವರಿಕೆ ಮಾಡಿಕೊಡುವ ಬಗ್ಗೆ ಚರ್ಚೆ ನಡೆದಿದೆ.
ಈಗಾಗಲೇ ಯಡಿಯೂರಪ್ಪನವರು ತಕ್ಷಣವೇ ಅಖಿಲ ಭಾರತ ವೀರಶೈವ ಮಹಾಸಭಾದ ಮುಖಂಡರು ಸಭೆ ಸೇರಿ ಮುಂದಿನ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ನಡೆಸಬೇಕೆಂದು ಒತ್ತಾಯಿಸಿದ್ದರು.
ಪಕ್ಷಕ್ಕೆ ಆಧಾರ ಸ್ತಂಭವಾಗಿರುವ ಲಿಂಗಾಯಿತ ಸಮುದಾಯವನ್ನು ದೂರ ಮಾಡಿಕೊಳ್ಳದೆ ಅವರನ್ನು ಇನ್ನಷ್ಟು ಹತ್ತಿರ ಮಾಡಿಕೊಳ್ಳಬೇಕು. ಬರಲಿರುವ ವಿಧಾನಸಭಾ ಚುನಾವಣೆಯಲ್ಲಿ ಈ ಸಮುದಾಯವನ್ನು ಪ್ರತಿನಿಧಿಸುವವರಿಗೆ ಟಿಕೆಟ್ ನೀಡಬೇಕೆಂಬ ಅಭಿಪ್ರಾಯವು ಕೇಳಿಬಂದಿದೆ.
ಮಾಜಿ ಮುಖ್ಯಮಂತ್ರಿ ದಿವಂಗತ ವೀರೇಂದ್ರ ಪಾಟೀಲ್ ಅಧಿಕಾರ ಕಳೆದುಕೊಂಡ ನಂತರ ಲಿಂಗಾಯಿತ ಸಮುದಾಯವು ಕಳೆದ 3-4 ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲವಾಗಿ ನಿಂತಿದೆ.
2013ರ ವಿಧಾನಸಭೆ ಚುನಾವಣೆಯಲ್ಲಿ ಕೆಜೆಪಿ-ಬಿಜೆಪಿ ಎಂದು ಇಬ್ಭಾಗವಾದರೂ ಅಂದು ವೀರಶೈವ ಲಿಂಗಾಯಿತ ಸಮುದಾಯ ಯಡಿಯೂರಪ್ಪನವರ ಬೆಂಬಲಕ್ಕೆ ನಿಂತಿತ್ತು.
ಈ ಸಮುದಾಯದ ಏಕಮೇವಾದ್ವೀತಿಯ ನಾಯಕರಾಗಿರುವ ಯಡಿಯೂರಪ್ಪನವರನ್ನು ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಿದೆ.ಇದನ್ನು ಸಮುದಾಯಕ್ಕೆ ಹೆಚ್ಚು ಮನವರಿಕೆ ಮಾಡಿಕೊಡಬೇಕೆಂಬ ಸಲಹೆ ಕೇಳಿಬಂದಿದೆ.
ಈ ಬೆಳವಣಿಗೆಗಳ ನಡುವೆಯೇ ನಿನ್ನೆ ಸಚಿವ ಸಂಪುಟದಲ್ಲಿ ರಾಜ್ಯ ಸರ್ಕಾರ ಕೈಗೊಂಡಿರುವ ತೀರ್ಮಾನಗಳ ಬಗ್ಗೆ ರಾಜ್ಯ ಬಿಜೆಪಿ ನಾಯಕರು ಹೈಕಮಾಂಡ್‍ಗೆ ರವಾನಿಸಿದ್ದಾರೆ.