ಹುಬ್ಬಳ್ಳಿ, ಮಾ.20- ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ಸಚಿವ ಸಂಪುಟ ಸಭೆ ಶಿಫಾರಸು ಮಾಡಿದ್ದು, ನಮ್ಮ ಹೋರಾಟಕ್ಕೆ ಸಿಕ್ಕ ಜಯ ಎಂದು ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟ ಸಮಿತಿ ಮುಖಂಡ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ಈ ನಿರ್ಧಾರದಿಂದ ಸಮಾಧಾನವೆನಿಸಿದೆ. ಸಚಿವ ಸಂಪುಟದ ಎಲ್ಲ ಸದಸ್ಯರಿಗೆ ಮತ್ತು ಮುಖ್ಯಮಂತ್ರಿಗಳಿಗೆ ಅಭಿನಂದಿಸುವೆ ಎಂದರು.
ಕಳೆದ ಒಂದು ವರ್ಷದಿಂದ ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ಹೋರಾಟ ಮಾಡುತ್ತಿದ್ದೇವೆ. ಬಸವ ತತ್ತ್ವ ಒಪ್ಪುವ ವೀರಶೈವರು ಸಹ ಇದರ ಜತೆ ಹೋಗಬಹುದು ಎಂದು ಹೇಳಿದ್ದಾರೆ. ಎಲ್ಲರನ್ನೂ ಒಂದುಗೂಡಿಸುವ ಕೆಲಸವನ್ನು ನ್ಯಾ.ನಾಗಮೋಹನ್ದಾಸ್ ಸಮಿತಿ ವರದಿ ಮಾಡಿದೆ.
ಲಿಂಗಾಯತರಿಗೆ ಒಳ್ಳೆಯದಾಗುವುದನ್ನು ಸಹಿಸದೆ ವಿರೋಧಿಸಿದರೆ ಜನರೇ ಆ ಬಗ್ಗೆ ಹೇಳುತ್ತಾರೆ. ಇದೆಲ್ಲ ಆದ ಮೇಲೆ ಏನಾದರೂ ಹೇಳಲೇಬೇಕು. ಹಾಗಾಗಿ ಹೇಳುತ್ತಾರೆ. ಅವರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಚುನಾವಣೆಗೂ ಇದಕ್ಕೂ ಸಂಬಂಧವಿಲ್ಲ. ಒಂದು ವರ್ಷದಿಂದ ಹೋರಾಟ ಮಾಡುತ್ತ ಬಂದಿದ್ದೇವೆ. ಚುನಾವಣೆ ವೇಳೆ ಇದು ಬಂದಿರುವುದು ಆಕಸ್ಮಿಕ ಎಂದರು.