![indian-railways-reservation-chart](http://kannada.vartamitra.com/wp-content/uploads/2018/02/indian-railways-reservation-chart.jpg)
ಮುಂಬೈ, ಮಾ.20-ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಬೇಡಿಕೆಗಾಗಿ ಆಗ್ರಹಿಸಿ ನೂರಾರು ವಿದ್ಯಾರ್ಥಿಗಳು ಇಂದು ವಾಣಿಜ್ಯನಗರಿ ಮುಂಬೈನಲ್ಲಿ ರೈಲು ತಡೆ ಚಳವಳಿ ನಡೆಸಿದರು. ಇದರಿಂದಾಗಿ ರೈಲುಗಳ ಸಂಚಾರಕ್ಕೆ ಅಡಚಣೆಯಾಗಿ ಸಹಸ್ರಾರು ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಿದರು.
ಅಸಂಖ್ಯಾತ ವಿದ್ಯಾರ್ಥಿಗಳು ಇಂದು ಬೆಳಗ್ಗೆ 7 ಗಂಟೆಗೆ ಮಾತುಂಗ ಮತ್ತು ದಾದರ್ ರೈಲು ನಿಲ್ದಾಣಗಳು ಸೇರಿದಂತೆ ವಿವಿಧೆಡೆ ರೈಲು ಹಳಿಗಳ ಮೇಲೆ ಕುಳಿತು ಉದ್ಯೋಗ ಬೇಡಿಕೆ ಈಡೇರಿಕೆಗಾಗಿ ಧರಣಿ ನಡೆಸಿದರು. ಇದರಿಂದಾಗಿ ಈ ಎರಡೂ ಮಾರ್ಗಗಳೂ ಸೇರಿದಂತೆ ಸಬ್ಅರ್ಬನ್ ಮತ್ತು ಸ್ಥಳೀಯ ರೈಲುಗಳ ಸಂಚಾರಕ್ಕೆ ಅಡಚಣೆಯಾಯಿತು. ವಿದ್ಯಾರ್ಥಿಗಳ ರೈಲು ತಡೆ ಚಳವಳಿಯ ಬಿಸಿ ಸಾವಿರಾರು ಪ್ರಯಾಣಿಕರಿಗೆ ಮುಟ್ಟಿತು.
ವಿದ್ಯಾರ್ಥಿಗಳ ಪ್ರತಿಭಟನೆಯಿಂದಾಗಿ ಮಾತುಂಗ ಮತ್ತು ಸಿಎಸ್ಎಂಟಿ ನಡುವೆ ಇಡೀ ನಾಲ್ಕು ಮಾರ್ಗಗಳ ಪ್ರಯಾಣಕ್ಕೆ ಅಡಚಣೆಯಾಗಿತ್ತು. ರೈಲ್ವೆ ಮತ್ತು ಪೆÇಲೀಸ್ ಇಲಾಖೆ ಅಧಿಕಾರಿಗಳು ಪ್ರತಿಭಟನಾನಿರತ ವಿದ್ಯಾರ್ಥಿಗಳ ಮನವೊಲಿಕೆ ಯತ್ನ ನಡೆಸಿದರು.
ಕಳೆದ ನಾಲ್ಕು ವರ್ಷಗಳಿಂದ ರೈಲ್ವೆ ಇಲಾಖೆಯಲ್ಲಿ ನೇಮಕಾತಿ ನಡೆದಿಲ್ಲ. ನಾವು ಉದ್ಯೋಗಕ್ಕಾಗಿ ನಿರಂತರ ಯತ್ನಗಳನ್ನು ನಡೆಸುತ್ತಿದ್ದೇವೆ. ನಿರುದ್ಯೋಗದಿಂದ 10 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂಥ ಘಟನೆಗಳು ಮರುಕಳಿಸಲು ನಾವು ಬಿಡುವುದಿಲ್ಲ. ನಮ್ಮ ಉದ್ಯೋಗ ಬೇಡಿಕೆ ಈಡೇರಬೇಕು ಎಂದು ಪ್ರತಿಭಟನಾನಿರತರು ಆಗ್ರಹಿಸಿದ್ದಾರೆ. ರೈಲ್ವೆ ಸಚಿವ ಪಿಯೂಷ್ ಗೋಯೆಲ್ ಇಲ್ಲಿಗೆ ಬಂದು ನಮ್ಮ ಅಹವಾಲುಗಳನ್ನು ಸ್ವೀಕರಿಸುವ ತನಕ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ವಿದ್ಯಾರ್ಥಿ ನಾಯಕರು ಹೇಳಿದ್ದಾರೆ.