ಲಿಂಗಾಯತ ಸ್ವತಂತ್ರ ಧರ್ಮ ವಿಚಾರ : ಅಖಿಲ ಭಾರತ ವೀರಶೈವ ಮಹಾಸಭಾ ತೀರ್ಮಾನಕ್ಕೆ ಬಿಜೆಪಿ ಸಹಮತ

ಬೆಂಗಳೂರು, ಮಾ.20-ಲಿಂಗಾಯತ ಸ್ವತಂತ್ರ ಧರ್ಮ ವಿಚಾರ ಕುರಿತು ಬಿಜೆಪಿ ಅಖಿಲ ಭಾರತ ವೀರಶೈವ ಮಹಾಸಭಾ ತೀರ್ಮಾನಕ್ಕೆ ಸಹಮತ ವ್ಯಕ್ತಪಡಿಸುತ್ತದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ಡಾಲರ್ಸ್ ಕಾಲೋನಿಯ ತಮ್ಮ ನಿವಾಸದಲ್ಲಿ ಹಂಪಿ ಮಠದ ದಯಾನಂದಪುರಿ ಸ್ವಾಮೀಜಿ, ಲಿಂಗಾಯತ ಮುಖಂಡ ರೇವಣಸಿದ್ದಪ್ಪ, ವೀರಶೈವ ಸಮುದಾಯದ ಮುಖಂಡ ಪ್ರಸನ್ನ ಸೇರಿದಂತೆ ಸಮುದಾಯದ ಮುಖಂಡರ ಜೊತೆ ಚರ್ಚೆ ನಡೆಸಿದ ನಂತರ ಮಾತನಾಡಿದ ಬಿಎಸ್‍ವೈ, ರಾಜ್ಯಸರ್ಕಾರದ ತೀರ್ಮಾನ ಕುರಿತು ಸ್ವಾಮೀಜಿಗಳು ಸಮುದಾಯದ ನಾಯಕರನ್ನು ಕರೆದು ಅಖಿಲ ಭಾರತ ವೀರಶೈವ ಮಹಾಸಭಾ ಸಭೆ ನಡೆಸಬೇಕು ಎಂದು ಹೇಳಿದರು.

ಲಿಂಗಾಯತ ಸ್ವತಂತ್ರ ಧರ್ಮದ ಬಗ್ಗೆ ಈಗಾಗಲೇ ಸಾಕಷ್ಟು ಪರ-ವಿರೋಧಗಳು ವ್ಯಕ್ತವಾಗಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಬಹಳ ಜಾಣತನದಿಂದ ಈ ತೀರ್ಮಾನ ಕೈಗೊಂಡಿದ್ದಾರೆ. ಅವರು ಬುದ್ಧಿವಂತಿಕೆಯಿಂದ ತೆಗೆದುಕೊಂಡಿರುವ ಈ ತೀರ್ಮಾನದ ಬಗ್ಗೆ ಸಮುದಾಯದ ನಾಯಕರು, ಮಹಾಸಭಾದ ನಾಯಕರೊಂದಿಗೆ ಚರ್ಚಿಸುವ ಅಗತ್ಯವಿದೆ. ಈ ಕುರಿತು ಶ್ಯಾಮನೂರು ಶಿವಶಂಕರಪ್ಪ ಅವರನ್ನು ಕರೆಸಿ ಚರ್ಚಿಸುವಂತೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.

ವೀರಶೈವ ಮಹಾಸಭಾ ಈ ಕುರಿತು ಸಾಧಕ-ಬಾಧಕಗಳನ್ನು ಚರ್ಚಿಸಿ ಒಂದು ನಿರ್ಧಾರಕ್ಕೆ ಬರಬೇಕಿದೆ. ನಂತರ ಬಿಜೆಪಿ ನಿಲುವನ್ನು ತಿಳಿಸಲಾಗುವುದು ಎಂದು ಹೇಳಿದರು.

ಸದ್ಯಕ್ಕೆ ಬಿಜೆಪಿ ನಿಲುವಿನ ಬಗ್ಗೆ ಸ್ಪಷ್ಟನೆ ಬೇಡ:
ಈ ನಡುವೆ ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರ ಕುರಿತು ಸದ್ಯಕ್ಕೆ ಬಿಜೆಪಿ ನಿಲುವನ್ನು ಸ್ಪಷ್ಟಪಡಿಸುವುದು ಬೇಡ ಎಂದು ಬಿ.ಎಸ್.ಯಡಿಯೂರಪ್ಪ ಅವರಿಗೆ ಪಕ್ಷದ ಹೈಕಮಾಂಡ್ ಸೂಚನೆ ನೀಡಿದೆ.

ಕೆಲವು ದಿನ ಕಾದು ನೋಡುವ ತಂತ್ರ ಅನುಸರಿಸೋಣ. ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಪೆ ಕೆಳಗೆ ತೂರಿದರೆ, ನಾವು ರಂಗೋಲಿ ಕೆಳಗೆ ನುಸುಳೋಣ. ನೀವು ಯಾವುದಕ್ಕೂ ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ. ಮುಂದಿನ ಆಟ ನಮಗೆ ಬಿಟ್ಟುಬಿಡಿ. ನಾವು ಹೇಳಿದಂತೆ ನೀವು ಮಾಡಿ ಅಷ್ಟು ಸಾಕು ಎಂದು ಯಡಿಯೂರಪ್ಪ ಅವರಿಗೆ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಸೂಚನೆ ನೀಡಿದ್ದು, ಈ ಬಗ್ಗೆ ರಾಷ್ಟ್ರೀಯ ಸಹಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಮೂಲಕ ಇಂತಹ ಸಂದೇಶ ರವಾನಿಸಿದ್ದಾರೆ ಎಂದು ತಿಳಿದುಬಂದಿದೆ.

ನಾಲ್ವರಿಗೆ ಟಿಕೆಟ್ ನೀಡಲು ಮನವಿ: ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀ ದಯಾನಂದಪುರಿ ಸ್ವಾಮೀಜಿ, ಬೆಂಗಳೂರಿನ ನೇಕಾರ ಸಮುದಾಯದ ನಾಲ್ಕು ಮಂದಿಗೆ ಟಿಕೆಟ್ ನೀಡಬೇಕೆಂದು ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದೇನೆ ಎಂದು ತಿಳಿಸಿದರು.

ನೇಕಾರ ಸಮುದಾಯಕ್ಕೆ ಬಿಜೆಪಿ ಪ್ರಣಾಳಿಕೆಯಲ್ಲಿ ಹೆಚ್ಚು ಸವಲತ್ತು ಕಲ್ಪಿಸಬೇಕು ಎಂದು ಕೋರಿದ್ದೇವೆ. ಇದಕ್ಕೆಲ್ಲ ಯಡಿಯೂರಪ್ಪ ಉತ್ತಮವಾಗಿ ಸ್ಪಂದಿಸಿದ್ದಾರೆ ಎಂದು ಹೇಳಿದರು.

ಚಾಮರಾಜಪೇಟೆ ಕ್ಷೇತ್ರದಿಂದ ಗಣೇಶ್, ಗಾಂಧಿನಗರದಿಂದ ಶಿವಕುಮಾರ್, ಶಿವಾಜಿನಗರದಿಂದ ಗೋಪಿ, ಮಹಾಲಕ್ಷ್ಮಿಲೇಔಟ್‍ನಿಂದ ಹರೀಶ್ ಅವರಿಗೆ ಟಿಕೆಟ್ ನೀಡಲು ಕೋರಲಾಗಿದೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ