
ಖಗಾಡಿಯಾ, ಮಾ.19-ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರೈತರ ಪರವಾಗಿ ಇಲ್ಲ ಬದಲಿಗೆ ಅದು ಉದ್ಯಮಿಗಳ ಹಿತೈಷಿ ಎಂದು ಖ್ಯಾತ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಟೀಕಿಸಿದ್ದಾರೆ.
ಬಿಹಾರದ ಖಗಾಡಿಯಾದಲ್ಲಿ ನಡೆದ ರೈತರ ರ್ಯಾಲಿಯಲ್ಲಿ ಭಾಗವಹಿಸಿದ್ದ ಅಣ್ಣಾ ಹಜಾರೆ ಅವರು ಎಂದಿನಂತೆ ಮೋದಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.
ದೇಶದಲ್ಲಿ ರೈತರ ಬವಣೆ ಹೇಳತೀರದಂತಾಗಿದೆ. ಸಾಲಬಾಧೆಯಿಂದ ಕೃಷಿಕರ ಸರಣಿ ಸಾವು ಮುಂದುವರಿದಿದೆ. ಆದರೆ ಯಾವೊಬ್ಬ ಉದ್ಯಮಿಯೂ ಆತ್ಮಹತ್ಯೆ ಮಾಡಿಕೊಂಡಿಲ್ಲ. ಸರ್ಕಾರವು ರೈತರ ಹಿತೈಷಿಯಾಗುವ ಬದಲು ಉದ್ಯಮಿಗಳ ಹಿತೈಷಿಯಾಗಿದೆ ಎಂದು ಆರೋಪಿಸಿದರು.
ರೈತರ ಸಮಸ್ಯೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಪ್ರಧಾನಿ ಮೋದಿಗೆ ತಾವು ಈವರೆಗೆ 32 ಪತ್ರಗಳನ್ನು ಬರೆದಿದ್ದು, ಒಂದೇ ಒಂದಕ್ಕೂ ಈವರೆಗೆ ಉತ್ತರ ಲಭಿಸಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಮಾರ್ಚ್ 23ರಂದು ದೆಹಲಿಯಲ್ಲಿ ರೈತರ ಬೃಹತ್ ರ್ಯಾಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ದೇಶದ ಎಲ್ಲ ಕೃಷಿಕರು ಭಾಗವಹಿಸಿ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಕೇಂದ್ರ ಸರ್ಕಾರದ ಗಮನಸೆಳೆಯಬೇಕು ಎಂದು ಅವರು ಕರೆ ನೀಡಿದರು.