ಮುಂಬೈ:ಮಾ-19: 2019ರಲ್ಲಿ ದೇಶವನ್ನು ಮೋದಿ ಮುಕ್ತ ಮಾಡಲು ಪ್ರತಿಪಕ್ಷಗಳು ಒಂದಾಗಬೇಕು ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್ ಠಾಕ್ರೆ ಕರೆ ನೀಡಿದ್ದಾರೆ.
ಶಿವಾಜಿ ಉದ್ಯಾನದಲ್ಲಿ ಆಯೋಜಿಸಿದ್ದ ಪಕ್ಷದ ಸಮಾವೇಶದಲ್ಲಿ ಮಾತನಾಡಿದ ಅವರು, ‘ನರೇಂದ್ರ ಮೋದಿ ಮತ್ತು ಅವರ ಸರ್ಕಾರದ ಈಡೇರಿಸಲಾಗದ ಭರವಸೆಗಳಿಂದ ದೇಶದ ಜನರು ರೋಸಿ ಹೋಗಿದ್ದಾರೆ’ ಎಂದರು. ಬಿಜೆಪಿಯವರ ‘ಕಾಂಗ್ರೆಸ್ ಮುಕ್ತ ಭಾರತ’ ಘೋಷಣೆಗೆ ಪರ್ಯಾಯವಾಗಿ ಎಲ್ಲ ರಾಜಕೀಯ ಪಕ್ಷಗಳು ‘ಮೋದಿ ಮುಕ್ತ ಭಾರತ’ ನಿರ್ಮಾಣಕ್ಕೆ ಮುಂದಾಗಬೇಕು ಎಂದು ರಾಜ್ ಠಾಕ್ರೆ ಕರೆ ನೀಡಿದ್ದಾರೆ.
ಭಾರತ 1947ರಲ್ಲಿ ಮೊದಲ ಸ್ವಾತಂತ್ರ್ಯ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಬಳಿಕ 1977 (ತುರ್ತು ಪರಿಸ್ಥಿತಿಯ ನಂತರ) ಎರಡನೇ ಸ್ವಾತಂತ್ರ್ಯ ಪಡೆದುಕೊಂಡಿತ್ತು. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ‘ಮೋದಿ ಮುಕ್ತ ಭಾರತ’ ಆಗುವುದಾದರೆ, ಮೂರನೇ ಬಾರಿ ಸ್ವಾತಂತ್ರ್ಯವನ್ನು ಪಡೆದುಕೊಳ್ಳಬಹುದು ಎಂದಿದ್ದಾರೆ ಠಾಕ್ರೆ.
ಮೋದಿ ಸರ್ಕಾರ ಮಾಡಿದ ನೋಟು ಅಮಾನ್ಯೀಕರಣವನ್ನು ತನಿಖೆಗೆ ಒಳಪಡಿಸಿದ್ದೆ ಆದಲ್ಲಿ, ಸ್ವಾತಂತ್ರ್ಯ ನಂತರದ ಬಹುದೊಡ್ಡ ಹಗರಣ ಹೊರಬರಲಿದೆ’ ಎಂದು ಅವರು ಆರೋಪಿಸಿದರು.
‘ನಾವು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗುವುದನ್ನು ಬಯಸುತ್ತೇವೆ. ಆದರೆ, ಅದನ್ನೇ ಚುನಾವಣೆ ಅಜೆಂಡಾ ಮಾಡಿಕೊಳ್ಳುವ ಮೂಲಕ ಮತ ಬೇಟೆಗೆ ನಿಲ್ಲಬಾರದು’, ಸಮಾಜವನ್ನು ವಿಭಜನೆಗೆ ಮುಂದಾಗುವುದನ್ನು ನಾವೆಂದಿಗೂ ಸಹಿಸುವುದಿಲ್ಲ ಎಂದು ರಾಜ್ ಠಾಕ್ರೆ ಅಭಿಪ್ರಾಯಪಟ್ಟಿದ್ದಾರೆ.
ಮೋದಿ ಅವರ ವಿದೇಶ ಪ್ರವಾಸಗಳು ದೇಶಕ್ಕೆ ಬಂಡವಾಳವನ್ನು ತರುತ್ತಿಲ್ಲ. ಬದಲಾಗಿ ಅವರು ಪಕೋಡಾ ತಯಾರಿಕೆಗೆ ಬೇಕಾದ ಹಿಟ್ಟು ತರಲು ದೇಶಗಳನ್ನು ಸುತ್ತುತ್ತಿದ್ದಾರೆ ಎನಿಸುತ್ತಿದೆ ಎಂದು ವ್ಯಂಗ್ಯವಾಡಿದರು.
ಇದೇ ವೇಳೆ ಮಾಧ್ಯಮಗಳ ವಿರುದ್ಧ ಕಿಡಿಕಾರಿದ ಠಾಕ್ರೆ, ಮಾಧ್ಯಮ, ನ್ಯಾಯಾಂಗ ಮತ್ತು ಸಿಬಿಐ ನಂತಹ ಸಂಸ್ಥೆಗಳನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ. ಮಾಧ್ಯಮಗಳು ಸರ್ಕಾರದ ಒತ್ತಡಕ್ಕೆ ಸಿಲುಕಿವೆ ಎಂದು ಗುಡುಗಿದ್ದಾರೆ.
Raj Thackeray, asks Opposition unite ,’Modi-mukt Bharat’