ಬೆಂಗಳೂರು, ಮಾ.19- ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರ ರಾಜಕೀಯ ಭವಿಷ್ಯವನ್ನು ಮುಗಿಸುವುದಾಗಿ ಬೆದರಿಕೆ ಹಾಕಿರುವ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಎಂ.ವೀರಪ್ಪಮೊಯ್ಲಿ ವಿರುದ್ಧ ದಲಿತ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.
ಇತ್ತೀಚೆಗೆ ನಡೆದ ಚುನಾವಣಾ ಸಮಿತಿ ಸಭೆಯಲ್ಲಿ ಅಭ್ಯರ್ಥಿಗಳ ಆಯ್ಕೆ ವಿಷಯವಾಗಿ ಮಹದೇವಪ್ಪ ಮತ್ತು ಮೊಯ್ಲಿ ನಡುವೆ ಜಟಾಪಟಿ ನಡೆದಿತ್ತು. ಆ ಸಂದರ್ಭದಲ್ಲಿ ನಿಮ್ಮ ರಾಜಕೀಯ ಭವಿಷ್ಯ ಮುಗಿಸುತ್ತೇನೆ ಎಂದು ಮಹದೇವಪ್ಪ ಅವರಿಗೆ ಮೊಯ್ಲಿ ಬೆದರಿಕೆ ಹಾಕಿದ್ದರು ಎಂಬ ಆರೋಪಗಳು ಕೇಳಿ ಬಂದಿವೆ.
ಈ ಹಿನ್ನೆಲೆಯಲ್ಲಿ ದಲಿತ ಸಂಘಟನೆಗಳು ಆಕ್ರೋಶಗೊಂಡಿದ್ದು, ಮಹದೇವಪ್ಪ ಪರವಾಗಿ ಹೋರಾಟಕ್ಕೆ ಮುಂದಾಗಿವೆ. ಮಹದೇವಪ್ಪ ಅವರು ಸಂಪುಟದಲ್ಲಿ ಸಕ್ರಿಯ ಸಚಿವರಾಗಿದ್ದು, ದಲಿತ ಸಮುದಾಯದ ಏಳ್ಗೆಗಾಗಿ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ.
ಜನಸಂಖ್ಯೆ ಆಧಾರಿತವಾಗಿ ಬಜೆಟ್ನಲ್ಲಿ ಅನುದಾನ ಕಾಯ್ದಿರಿಸುವ ಉಪಯೋಜನೆ ಕಾಯ್ದೆ, ಗುತ್ತಿಗೆಯಲ್ಲಿ ದಲಿತರಿಗೆ ಮೀಸಲಾತಿ, ಮುಬಡ್ತಿ ಸೇರಿದಂತೆ ಹಲವಾರು ವಿಷಯಗಳಲ್ಲಿ ಮಹದೇವಪ್ಪ ಅವರು ಸಕ್ರಿಯವಾಗಿ ಕೆಲಸ ಮಾಡಿದ್ದಾರೆ. ಜಾತ್ಯಾತೀತ ಯೋಜನೆಗಳನ್ನು ಕೈಗೆತ್ತಿಕೊಂಡು ಲೋಕೋಪಯೋಗಿ ಇಲಾಖೆಯಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಸದಾ ಕಾಲ ಮುಖ್ಯಮಂತ್ರಿ ಅವರಿಗೆ ಹೆಗಲು ಕೊಟ್ಟು ಸರ್ಕಾರ ಜನಪರ ಕಾರ್ಯಗಳನ್ನು ಕೈಗೊಳ್ಳಲು ಸಾಥ್ ನೀಡಿದ್ದಾರೆ.
ಮಹದೇವಪ್ಪ ಅವರಿಂದ ಪಕ್ಷಕ್ಕೆ ಯಾವುದೇ ಹಾನಿಯಾಗಿಲ್ಲ. ಅಂತಹವರ ವಿರುದ್ಧ ಮೊಯ್ಲಿ ಅವರು ರಾಜಕೀಯ ಹಗೆ ಸಾಧಿಸಲು ಹೊರಟಿವುರುವು ಸರಿಯಲ್ಲ. ಹಿರಿಯ ನಾಯಕರಾದ ಮೊಯ್ಲಿ ಅವರಿಗೆ ಇದು ಶೋಭೆಯಲ್ಲ. ತಮ್ಮ ಮಗನಿಗೆ ಟಿಕೆಟ್ ಕೊಡಿಸಬೇಕು ಎಂಬ ಆಶೆಯಿಂದ ಪಕ್ಷಕ್ಕಾಗಿ ದುಡಿದವರ ವಿರುದ್ಧ ಆರೋಪ ಮಾಡುವುದು, ಹಗೆ ಸಾಧಿಸುವುದು ಸೂಕ್ತವಲ್ಲ. ಹೈಕಮಾಂಡ್ ವೀರಪ್ಪಮೊಯ್ಲಿ ವಿರುದ್ಧ ಕ್ರಮ ಕೈಗೊಳ್ಳಬೇಕು ಇಲ್ಲವಾದರೆ ಪ್ರತಿಭಟನೆ ಅನಿವಾರ್ಯವಾಗುತ್ತದೆ ಎಂದು ದಲಿತ ಸಂಘಟನೆಗಳು ಎಚ್ಚರಿಕೆ ನೀಡಿವೆ.
ವೀರಪ್ಪ ಮೊಯ್ಲಿ ಅವರು ಟ್ವೀಟ್ ಮಾಡಿದ ನಂತರ ಕಾಂಗ್ರೆಸ್ ಪಾಳಯದಲ್ಲಿ ಸಂಚಲನ ಉಂಟಾಗಿದ್ದು, ಖುದ್ದಾಗಿ ಎಐಸಿಸಿ ಅಧ್ಯಕ್ಷ ರಾಹುಲ್ಗಾಂಧಿ ಅವರೇ ಮಧ್ಯ ಪ್ರವೇಶಿಸಿ ಬುದ್ದಿವಾದ ಹೇಳುವ ಹಂತಕ್ಕೆ ತಲುಪಿದೆ. ಈಗ ದಲಿತ ಸಂಘಟನೆಗಳು ಕೂಡ ಮಹದೇವಪ್ಪ ಪರವಾಗಿ ಧನಿ ಎತ್ತಲು ಶುರು ಮಾಡಿರುವುದರಿಂದ ಚುನಾವಣೆ ಮೇಲೆ ಮತ್ತಷ್ಟು ಪರಿಣಾಮಬೀರುವ ಸಾಧ್ಯತೆ ಇದೆ.