ಬೆಂಗಳೂರು, ಮಾ.19- ಲಿಂಗಾಯಿತ ಪ್ರತ್ಯೇಕ ಧರ್ಮ ಸ್ಥಾಪನೆಗೆ ಕೇಂದ್ರಕ್ಕೆ ಶಿಫಾರಸು ಮಾಡುವ ಕುರಿತಂತೆ ಇಂದು ನಡೆದ ಸಂಪುಟಸಭೆಯಲ್ಲಿ ಸಚಿವರ ನಡುವೆ ವಾಗ್ವಾದ ಏರ್ಪಟ್ಟಿತ್ತು.
ಸಭೆ ಆರಂಭಕ್ಕೂ ಮುನ್ನವೇ ಪರ-ವಿರುದ್ಧವಾಗಿದ್ದ ಕೆಲ ಸಚಿವರು ಮಾಧ್ಯಮಗಳಿಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಅದು ಸಂಪುಟಸಭೆಯಲ್ಲೂ ಕೂಡ ಭಾರೀ ಮಾತಿನ ಚಕಮಕಿ ನಡೆಯಿತು ಎಂದು ಹೇಳಲಾಗಿದೆ.
ಏನೋ ಮಾಡಲು ಹೋಗಿ ಈಗ ಧರ್ಮದ ವಿರುದ್ಧ ಕಂದಕ ಸೃಷ್ಟಿಸುವ ಕೆಲಸ ಮಾಡಲಾಗಿದೆ. ಸುಮ್ಮನೆ ಮಠಾಧೀಶರು ಹಾಗೂ ಜನರನ್ನು ಎದುರು ಹಾಕಿಕೊಳ್ಳುವ ಸಂದರ್ಭ ಎದುರಾಗಿರುವುದು ವಿಪರ್ಯಾಸ ಎಂದು ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಎಂ.ಬಿ.ಪಾಟೀಲ್ ಹಾಗೂ ಇತರರ ಮೇಲೆ ಕಿಡಿಕಾರಿದರು ಎಂದು ತಿಳಿದು ಬಂದಿದೆ.
ಈ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಮಾಧಾನಪಡಿಸಿ ಸೌಹಾರ್ದಯುತವಾಗಿ ಇದನ್ನು ಬಗೆಹರಿಸಿಕೊಳ್ಳೋಣ, ಸುಮ್ಮನೆ ವಾಗ್ವಾದ ನಡೆಸುವುದರಲ್ಲಿ ಅರ್ಥವಿಲ್ಲ. ಸರ್ಕಾರ ಸೂಕ್ತ ಕ್ರಮಕೈಗೊಳ್ಳುತ್ತದೆ ಎಂದು ಅವರನ್ನು ಸುಮ್ಮನಿರಿಸಿದ್ದಾರೆ.
ಬೆಳಗ್ಗೆ 10.45ರಲ್ಲಿ ಆರಂಭಗೊಂಡ ಸಂಪುಟಸಭೆ ಸುದೀರ್ಘ ಎರಡು ಗಂಟೆಯವರೆಗೂ ನಡೆಯಿತು. ಈ ನಡುವೆ ಹೈಕೋರ್ಟ್ನ ಅಡ್ವೋಕೇಟ್ ಜನರಲ್ ಮಧುಸೂದನ್ ಅವರನ್ನೂ ಕರೆಸಿಕೊಂಡು ಸಿಎಂ ಚರ್ಚೆ ನಡೆಸಿದರು.
ಇದು ಕೊನೆಯ ಸಂಪುಟಸಭೆ ಎಂದು ಹೇಳಲಾಗುತ್ತಿದ್ದು, ಲಿಂಗಾಯಿತ ಪ್ರತ್ಯೇಕ ಧರ್ಮ ಮಾಡುತ್ತಾರೋ, ಇಲ್ಲವೋ ಎಂಬುದರ ಬಗ್ಗೆ ರಾಜ್ಯದಲ್ಲೇ ಅಲ್ಲದೆ ರಾಷ್ಟ್ರಾದ್ಯಂತ ಭಾರೀ ಕುತೂಹಲ ಕೆರಳಿಸಿದೆ.