ಬೆಂಗಳೂರು, ಮಾ.19-ರಾಜ್ಯಸಭಾ ಚುನಾವಣೆ ವೇಳೆ ಅಡ್ಡಮತದಾನ ನಡೆಸಿದ ಹಿನ್ನೆಲೆಯಲ್ಲಿ ಜೆಡಿಎಸ್ನ ಏಳು ಮಂದಿ ಭಿನ್ನಮತೀಯ ಶಾಸಕರನ್ನು ಅನರ್ಹಗೊಳಿಸುವ ಸಂಬಂಧ ವಾದ-ವಿವಾದ ಆಲಿಸಿದ ವಿಧಾನಸಭೆ ಸ್ಪೀಕರ್ ತಮ್ಮ ತೀರ್ಪನ್ನು ಕಾಯ್ದಿರಿಸಿದ್ದಾರೆ.
ವಿಧಾನಸೌಧದಲ್ಲಿಂದು ಸ್ಪೀಕರ್ ಕೆ.ಬಿ.ಕೋಳಿವಾಡ ಅವರ ಕೊಠಡಿಯಲ್ಲಿ ಜೆಡಿಎಸ್ನ 7 ಮಂದಿ ಭಿನ್ನಮತೀಯರು ಹಾಗೂ ಜೆಡಿಎಸ್ನ ದೂರುದಾರರ ಅರ್ಜಿ ವಿಚಾರಣೆಯನ್ನು ನಡೆಸಿದರು.
ಎರಡೂ ಕಡೆ ವಾದ-ವಿವಾದವನ್ನು ಆಲಿಸಿದ ಸ್ಪೀಕರ್ ಕೋಳಿವಾಡ ಅವರು ತೀರ್ಪನ್ನು ಕಾಯ್ದಿರಿಸಿದ್ದಾರೆ.
ಇದೇ 23ರಂದು ರಾಜ್ಯಸಭೆ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸ್ಪೀಕರ್ ನೀಡಲಿರುವ ಆದೇಶ ಎಲ್ಲರ ಕುತೂಹಲ ಕೆರಳಿಸಿದೆ. ಇದಕ್ಕೂ ಮುನ್ನ ಸ್ಪೀಕರ್ ಕೊಠಡಿಯಲ್ಲಿ ಸುಮಾರು ಒಂದು ಗಂಟೆಗೂ ಹೆಚ್ಚುಕಾಲ ಎರಡೂ ಕಡೆಗಳಿಂದ ಕಾವೇರಿದ ವಾದ-ವಿವಾದ ನಡೆಯಿತು.
ಏಳು ಮಂದಿ ಭಿನ್ನಮತೀಯ ಶಾಸಕರಲ್ಲಿ ಚೆಲುವರಾಯಸ್ವಾಮಿ, ಜಮೀರ್ ಅಹಮ್ಮದ್, ಎಚ್.ಸಿ.ಬಾಲಕೃಷ್ಣ ಹಾಗೂ ಅಖಂಡ ಶ್ರೀನಿವಾಸಮೂರ್ತಿ ಹಾಜರಾಗಿದ್ದರು. ಶಾಸಕರಾದ ಭೀಮಾನಾಯಕ್, ರಮೇಶ್ ಬಂಡಿಸಿದ್ದೇಗೌಡ, ಇಕ್ಬಾಲ್ ಅನ್ಸಾರಿ ಗೈರು ಹಾಜರಾಗಿದ್ದರು.
ಜೆಡಿಎಸ್ ಪರವಾಗಿ ದೂರುದಾರರಾದ ಬಾಲಕೃಷ್ಣ ಹಾಗೂ ಬಿ.ಬಿ.ನಿಂಗಯ್ಯ ಹಾಜರಾಗಿದ್ದರು. ಮೊದಲು ಜೆಡಿಎಸ್ನ ಭಿನ್ನಮತೀಯ ಶಾಸಕರ ಪರವಾದ ಮಂಡಿಸಿದ ಹಿರಿಯ ವಕೀಲ ರಾಜ್ಗೋಪಾಲ್ ಅವರು, ಸಂವಿಧಾನದ ಷೆಡ್ಯೂಲ್ 10ರ ಪ್ರಕಾರ ರಾಜ್ಯಸಭೆ ಚುನಾವಣೆಯಲ್ಲಿ ಶಾಸಕರು ಏಜೆಂಟರಿಗೆ ತೋರಿಸಿ ಮತಹಾಕುತ್ತಾರೆ. ಭಿನ್ನಮತೀಯರೆನಿಸಿದ ಶಾಸಕರು ತಾವು ಇಂತಹುದೇ ಅಭ್ಯರ್ಥಿಗೆ ಮತ ಹಾಕುತ್ತೇವೆಂದು ಜೆಡಿಎಸ್ನ ಶಾಸಕರಾದ ಎಚ್.ಡಿ.ರೇವಣ್ಣ ಅವರಿಗೆ ತೋರಿಸಿಯೇ ಮತ ಹಾಕಿದ್ದಾರೆ. ಹಾಗಾಗಿ ಇದು ಪಕ್ಷಾಂತರ ನಿಷೇಧ ಕಾಯ್ದೆ ವ್ಯಾಪ್ತಿಗೆ ಬರುವುದಿಲ್ಲ ಎಂದು ಸ್ಪೀಕರ್ ಗಮನಕ್ಕೆ ತಂದರು.
ಈ ಹಿಂದೆ ಸಂಸತ್ತಿನಲ್ಲಿ ಕೆಲವು ಸದಸ್ಯರು ದುಡ್ಡಿಗಾಗಿ ಪ್ರಶ್ನೆ ಕೇಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂದು ಲೋಕಸಭೆ ಸ್ಪೀಕರ್ ಸೋಮನಾಥ ಚಟರ್ಜಿಯವರು 12 ಮಂದಿ ಸದಸ್ಯರನ್ನು ಅನರ್ಹಗೊಳಿಸಿದ್ದರು.
ಸುಪ್ರೀಂಕೋರ್ಟ್ ಈ ವಿಷಯಕ್ಕೆ ಸಂಬಂಧಿಸಿದಂತೆ ನೋಟಿಸ್ ನೀಡಿದಾಗ ಸಂಸತ್ತಿನ ಪರಮಾಧಿಕಾರ ಪ್ರಶ್ನಿಸುವ ಅಧಿಕಾರ ಸುಪ್ರೀಂಕೋರ್ಟ್ಗೆ ಇಲ್ಲ ಎಂದು ಪುನಃ ಆ ನೋಟಿಸನ್ನು ಸುಪ್ರೀಂಕೋರ್ಟ್ಗೆ ಕಳುಹಿಸಿದ್ದರು. ಶಾಸಕರು ನಿರ್ದಿಷ್ಟ ಏಜೆಂಟರಿಗೆ ತೋರಿಸಿಯೇ ಮತಹಾಕಿರುವುದರಿಂದ ಕಾನೂನು ಉಲ್ಲಂಘನೆ ಪ್ರಶ್ನೆಯೇ ಉದ್ಬವಿಸುವುದಿಲ್ಲ.
ಈ ಹಿಂದೆ ಗೋವಾ ಮುಖ್ಯಮಂತ್ರಿ ರವಿಕಾಂತ ನಾಯಕ್ ಪ್ರಕರಣದಲ್ಲಿ ಅಡ್ಡಮತದಾನ ಮಾಡಿದ ಕೆಲ ಶಾಸಕರನ್ನು ಸದಸ್ಯತ್ವದಿಂದ ಅನರ್ಹಗೊಳಿಸಲಾಗಿತ್ತು. ಅವರು ಕಾನೂನು ಉಲ್ಲಂಘಿಸಿದ್ದರು. ಆದರೆ, ಇಲ್ಲಿ ಶಾಸಕರು ಕಾನೂನು ಉಲ್ಲಂಘನೆ ಮಾಡದ ಕಾರಣ ಅನರ್ಹತೆ ಪ್ರಶ್ನೆ ಬರುವುದಿಲ್ಲ ಎಂದು ಹೇಳಿದರು.
ಕರ್ನಾಟಕದಲ್ಲಿ ಈ ಹಿಂದೆ ಶಾಸಕರನ್ನು ಸ್ಪೀಕರ್ ಅನರ್ಹಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ನ್ಯಾಯ ಪಾಲನೆ ಮಾಡಲಾಗಿಲ್ಲ ಎಂದು ಸುಪ್ರೀಂಕೋರ್ಟ್ ಆಕ್ಷೇಪ ವ್ಯಕ್ತಪಡಿಸಿತ್ತು.
ಈಗ ನ್ಯಾಯಾಧೀಶರ ಸ್ಥಾನದಲ್ಲಿರುವ ನೀವು (ಸ್ಪೀಕರ್) ಸಾಮಾಜಿಕ ನ್ಯಾಯ ಎತ್ತಿ ಹಿಡಿಯುವಂತೆ ಮನವಿ ಮಾಡಿದರು.
ಜೆಡಿಎಸ್ ಪರ ವಾದ ಮಂಡಿಸಿದ ವಕೀಲ ನಿಶಾಂತ್ ಅವರು, ಶಾಸಕರು ನಾವು ಇಂತಹ ಅಭ್ಯರ್ಥಿಗೆ ಮತ ಹಾಕುತ್ತೇವೆಂದು ಹೇಳಿರುವುದೇ ಕಾನೂನು ಉಲ್ಲಂಘನೆ. ರಾಜ್ಯಸಭಾ ಚುನಾವಣೆಯಲ್ಲಿ ಏಜೆಂಟರಿಗೆ ತೋರಿಸಿ ಮತ ಹಾಕುವುದು ಸರಿಯಲ್ಲ. ಒಂದು ಪಕ್ಷದಿಂದ ಗೆದ್ದು ಮತ್ತೊಂದು ಪಕ್ಷಕ್ಕೆ ಮತ ಹಾಕುವುದೆಂದರೆ ಅದು ಅನೇಕ ಸಂಶಯಗಳನ್ನು ಹುಟ್ಟುಹಾಕುತ್ತದೆ.
ಕಾನೂನು ಉಲ್ಲಂಘನೆಯಾಗಿರುವ ಕಾರಣ ಶಾಸಕರ ಸದಸ್ಯತ್ವವನ್ನು ಅನರ್ಹಗೊಳಿಸುವಂತೆ ಮನವಿ ಮಾಡಿದರು. ಇದಕ್ಕೂ ಮುನ್ನ ಶಾಸಕ ಬಿ.ಬಿ.ನಿಂಗಯ್ಯ ಅವರು ಶಾಸಕರು ಮತದಾನಕ್ಕೂ ಮುನ್ನವೇ ಕಾಂಗ್ರೆಸ್ ನಾಯಕರಾದ ದಿಗ್ವಿಜಯ್ಸಿಂಗ್, ಎಐಸಿಸಿ ನಾಯಕ ರಾಹುಲ್ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವರನ್ನು ಭೇಟಿ ಮಾಡಿದ್ದರು. ಅವರ ಉದ್ದೇಶವೇ ಅಡ್ಡ ಮತದಾನ ಮಾಡುವುದು. ಭವಿಷ್ಯದಲ್ಲಿ ಇಂತಹ ಪ್ರಕರಣ ಮರುಕಳಿಸಬಾರದೆಂದರೆ ಇದಕ್ಕೆ ಇತಿಶ್ರೀ ಹಾಡುವಂತೆ ಕೋರಿದರು.
ಬೆಂಗಳೂರು, ಮಾ.19-ಕಳೆದ 2016ರ ರಾಜ್ಯಸಭೆ ಚುನಾವಣೆಯಲ್ಲಿ ವಿಪ್ ಉಲ್ಲಂಘಿಸಿ ಮತದಾನ ಮಾಡಿದ 7 ಶಾಸಕರ ಶಾಸಕತ್ವವನ್ನು ಅನರ್ಹಗೊಳಿಸಬೇಕೆಂದು ಸ್ಪೀಕರ್ಗೆ ದೂರು ನೀಡಿದ ಪ್ರಕರಣ ಇನ್ನೂ ಇತ್ಯರ್ಥವಾಗದ ಹಿನ್ನೆಲೆಯಲ್ಲಿ ಮಧ್ಯಪ್ರವೇಶಕ್ಕಾಗಿ ಜೆಡಿಎಸ್ ನ್ಯಾಯಾಲಯದ ಮೊರೆ ಹೋಗಿದೆ.
ಜೆಡಿಎಸ್ನ ಶಾಸಕರಾದ ಸಿ.ಎನ್.ಬಾಲಕೃಷ್ಣ, ಬಿ.ಬಿ.ನಿಂಗಯ್ಯ ಅವರುಗಳು. ವಿಪ್ ಉಲ್ಲಂಘಿಸಿದ ಶಾಸಕರ ಪ್ರಕರಣವನ್ನು ಸ್ಪೀಕರ್ ಇನ್ನೂ ಇತ್ಯರ್ಥಗೊಳಿಸದೇ ಇರುವ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ದೂರು ನೀಡಲಾಗಿದೆ.
2016ರ ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿದ್ದ ಬಿ.ಎಂ.ಫಾರೂಕ್ ವಿರುದ್ಧ ಪಕ್ಷದ ವಿಪ್ ಉಲ್ಲಂಘಿಸಿ ಶಾಸಕರಾದ ಚೆಲುವರಾಯಸ್ವಾಮಿ, ಬಾಲಕೃಷ್ಣ, ಅಖಂಡ ಶ್ರೀನಿವಾಸಮೂರ್ತಿ, ಇಕ್ಬಾಲ್ ಅನ್ಸಾರಿ, ರಮೇಶ್ಬಂಡಿಸಿದ್ದೇಗೌಡ ಸೇರಿದಂತೆ 8ಜನ ಮತದಾನ ಮಾಡಿದ್ದರು.
ಕೆಲ ಸಮಯದ ನಂತರ ಕೆ.ಗೋಪಾಲಯ್ಯ ಅವರು ಪಕ್ಷಕ್ಕೆ ಹಿಂದುರುಗಿದ್ದರು. ಅವರನ್ನು ಹೊರತುಪಡಿಸಿ 7ಜನರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸ್ಪೀಕರ್ಗೆ ದೂರು ನೀಡಲಾಗಿತ್ತು. ಈವರೆಗೂ ಸ್ಪೀಕರ್ ಇತ್ಯರ್ಥಗೊಳಿಸಿಲ್ಲ. ಈಗ ಮತ್ತೆ ರಾಜ್ಯಸಭೆ ಚುನಾವಣೆ ಎದುರಾಗಿದ್ದು, ಪಕ್ಷದ ಅಭ್ಯರ್ಥಿಯಾಗಿ ಫಾರೂಕ್ ಅವರನ್ನೇ ಕಣಕ್ಕಿಳಿಸಲಾಗಿದೆ.
ಹಿಂದಿನ ಪ್ರಕರಣವನ್ನು ಇತ್ಯರ್ಥಗೊಳಿಸಬೇಕೆಂದು ಜೆಡಿಎಸ್ ವರಿಷ್ಠರಾದ ಎಚ್.ಡಿ.ದೇವೇಗೌಡರು ಸ್ಪೀಕರ್ಗೆ ಮನವಿ ಮಾಡಿರುವ ಹಿನ್ನೆಲೆಯಲ್ಲಿ ಜೆಡಿಎಸ್ ಬಂಡಾಯ ಶಾಸಕರಿಗೆ ಸ್ಪೀಕರ್ ನೋಟಿಸ್ ನೀಡಿ ವಿಚಾರಣೆಗೆ ಕರೆದಿದ್ದಾರೆ. ಪ್ರಕರಣ ಇತ್ಯರ್ಥವಾಗದಿದ್ದರೆ ನ್ಯಾಯಾಲಯದ ಮೊರೆ ಹೋಗಲಿದ್ದಾರೆ.