ಬೆಂಗಳೂರು, ಮಾ.19-ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸಲು ಆಯೋಗ ಭರ್ಜರಿ ಸಿದ್ಧ್ದತೆ ನಡೆಸಿದೆ.
ಇಂದು ಬೆಂಗಳೂರು ಮಹಾನಗರ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಬಿಬಿಎಂಪಿ ಆಯುಕ್ತ ಮಂಜುನಾಥ್ಪ್ರಸಾದ್ ಅವರು, ಬೆಂಗಳೂರು ಪೆÇಲೀಸ್ ಆಯುಕ್ತರು, ಹಿರಿಯ ಪೆÇಲೀಸ್ ಅಧಿಕಾರಿಗಳು ಹಾಗೂ ಬಿಬಿಎಂಪಿ ಅಧಿಕಾರಿಗಳೊಂದಿಗೆ ಚುನಾವಣೆ ಸಿದ್ಧತೆ ಹಾಗೂ ಭದ್ರತೆ ಬಗ್ಗೆ ಮಹತ್ವದ ಸಭೆ ನಡೆಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆಯಲ್ಲಿ ಮತದಾರರು ನಿರ್ಭೀತಿಯಿಂದ ಮತ ಚಲಾಯಿಸಲು ಹಾಗೂ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸಲು ಎಲ್ಲಾ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. 550 ಉಸ್ತುವಾರಿ ತಂಡಗಳನ್ನು ರಚಿಸಲಾಗಿದೆ. ಮತದಾರರು ಯಾವುದೇ ಒತ್ತಡ ಹಾಗೂ ಆಮಿಷಕ್ಕೆ ಒಳಗಾಗುವುದನ್ನು ತಡೆಯಲು ಮತ್ತು ಒಳಗಾಗುತ್ತಿರುವ ಬಗ್ಗೆ ಮಾಹಿತಿ ಪಡೆಯಲು ಈ ತಂಡ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದರು.
8,278 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಪ್ರತಿ 15 ಮತಗಟ್ಟೆಗಳಿಗೆ ಒಂದರಂತೆ ಈ ತಂಡ ಕೆಲಸ ನಿರ್ವಹಿಸಲಿದೆ. ಪ್ರತಿ ಮತಗಟ್ಟೆಗೆ ಸ್ಪೆಕ್ಟರ್ ಮ್ಯಾಜಿಸ್ಟ್ರೇಟ್, ಹಿರಿಯ ಪೆÇಲೀಸ್ ಅಧಿಕಾರಿ, ವಿಡಿಯೋಗ್ರಾಫರ್ ಹಾಗೂ ಚುನಾವಣಾಧಿಕಾರಿಗಳನ್ನೊಳಗೊಂಡ ಉಸ್ತುವಾರಿ ತಂಡ ಕಾರ್ಯನಿರ್ವಹಿಸಲಿದೆ.
ಮತಗಟ್ಟೆ ವ್ಯಾಪ್ತಿಯಲ್ಲಿ ಮತದಾರ ಮೇಲೆ ಆಮಿಷವೊಡ್ಡುವವರು ಹಾಗೂ ಅವರ ಮೇಲೆ ಒತ್ತಡ ತರುವವರ ಮಾಹಿತಿಯನ್ನು ರಹಸ್ಯವಾಗಿ ಕಲೆ ಹಾಕಿ ಚುನಾವಣಾ ಆಯೋಗಕ್ಕೆ ರವಾನಿಸುತ್ತದೆ.
ಎಲ್ಲೆಲ್ಲಿ ಮತದಾರರ ಮೇಲೆ ಒತ್ತಡ, ಆಮಿಷಗಳ ಮಾಹಿತಿ ಇರುತ್ತದೆಯೋ ಅಂತಹ ಕಡೆಗಳಲ್ಲಿ ಆಯೋಗ ಸೂಕ್ತ ಕ್ರಮಕೈಗೊಂಡು ಮತದಾರರಲ್ಲಿ ವಿಶ್ವಾಸ ತುಂಬುವ ಕೆಲಸ ಮಾಡುತ್ತದೆ. ಇದಕ್ಕಾಗಿಯೇ 550 ತಂಡ ರಚಿಸಲಾಗಿದೆ ಎಂದು ಹೇಳಿದರು.
ಸೂಕ್ಷ್ಮ ಮತಗಟ್ಟೆಗಳ ಮಾನದಂಡಗಳನ್ನು ರೂಪಿಸಲಾಗಿದೆ. ಗುರುತಿನಚೀಟಿ, ಕಳೆದ ಬಾರಿ ಶೇ.90 ಮತದಾನವಾಗಿದ್ದ ಮತಗಟ್ಟೆಗಳು, ಒಂದೇ ಪಕ್ಷಕ್ಕೆ ಶೇ.70ರಷ್ಟು ಮತದಾನವಾಗಿದ್ದು, ಈ ಹಿಂದೆ ಗಲಾಟೆಯಾಗಿದ್ದ ಎಲ್ಲಾ ಮಾಹಿತಿಯನ್ನು ಕಲೆ ಹಾಕಲಾಗಿದೆ.
ತಾತ್ಕಾಲಿಕವಾಗಿ ಹೊರಗಡೆ ಹೋಗಿರುವವರ ಹೆಸರನ್ನು ಮತದಾರರ ಪಟ್ಟಿಯಿಂದ ಕೈ ಬಿಟ್ಟಿರುವ ಪ್ರಕರಣಗಳ ಬಗ್ಗೆಯೂ ಮಾಹಿತಿ ಸಂಗ್ರಹಿಸಲಾಗಿದೆ ಎಂದು ಹೇಳಿದರು.
ನೀತಿ ಸಂಹಿತೆ ಜಾರಿಯಾದ 24ಗಂಟೆಯೊಳಗೆ ನಗರ ವ್ಯಾಪ್ತಿಯ ಎಲ್ಲಾ ಭಿತ್ತಿಪತ್ರಗಳನ್ನು ತೆರವುಗೊಳಿಸಲಾಗುವುದು. ಮತ್ತೆ ಭಿತ್ತಿಪತ್ರಗಳನ್ನು ಹಾಕಿದರೆ ಅಂತಹವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ 6 ತಿಂಗಳ ಶಿಕ್ಷೆ ವಿಧಿಸುವ ಅಧಿಕಾರವಿದೆ. ನೀತಿ ಸಂಹಿತೆ ಉಲ್ಲಂಘಿಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 6 ಫ್ಲೈಯಿಂಗ್ ಸ್ಕ್ವಾಡ್ಗಳನ್ನು ಹಾಕಲಾಗುವುದು. ಈ ಸ್ಕ್ವಾಡ್ಗಳಿಗೆ ಜಿಪಿಎಸ್ ಅಳವಡಿಸಲಾಗಿರುತ್ತದೆ. ನೀತಿ ಸಂಹಿತೆ ಉಲ್ಲಂಘಿಸುವವರ ವಿರುದ್ಧ ಈ ಸ್ಕ್ವಾಡ್ಗಳು ಹದ್ದಿನ ಕಣ್ಣಿಟ್ಟಿರುತ್ತವೆ. ಇದಲ್ಲದೆ, 3 ಸ್ಟ್ಯಾಟಿಕ್ ಸ್ಕ್ವಾಡ್ಗಳು ನಿರ್ದಿಷ್ಟ ಸ್ಥಳದಲ್ಲಿ ನಿಂತು ಕಾರ್ಯನಿರ್ವಹಿಸಲಿವೆ ಎಂದು ಅವರು ಹೇಳಿದರು.
ಚುನಾವಣಾ ಆಯೋಗದ ನಿರ್ದೇಶನದಂತೆ ಒಂದೇ ಸ್ಥಳದಲ್ಲಿ ಮೂರು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿರುವ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ ಎಂದು ಅವರು ಹೇಳಿದರು.
ನಾಳೆ ಅಥವಾ ನಾಳಿದ್ದು ಕೇಂದ್ರ ಚುನಾವಣಾ ಆಯೋಗದ ಉಪ ಆಯುಕ್ತ ಉಮೇಶ್ಸಿನ್ಹಾ ಅವರು ನಗರಕ್ಕೆ ಆಗಮಿಸಲಿದ್ದು, ಪರಿಶೀಲನಾ ಸಭೆ ನಡೆಸಲಿದ್ದಾರೆ. ಇಲ್ಲಿನ ಭದ್ರತೆ, ಸಿದ್ಧತೆ ಬಗ್ಗೆ ಎಲ್ಲಾ ಮಾಹಿತಿಯನ್ನು ಕೇಂದ್ರ ಚುನಾವಣಾ ಆಯೋಗಕ್ಕೆ ರವಾನಿಸಲಿದ್ದು, ಮಾಹಿತಿ ಪಡೆದ ನಂತರ ಕೇಂದ್ರ ಚುನಾವಣಾ ಆಯೋಗ ಚುನಾವಣೆ ಘೋಷಣೆ ಮಾಡಲಿದೆ ಎಂದು ಹೇಳಿದರು.