ಮಹದೇವಪುರ ವಿಧಾನಸಭಾ ಕ್ಷೇತ್ರಕ್ಕೆ ಸ್ಥಳೀಯ ಹಾಗೂ ಸುಶಿಕ್ಷಿತ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕೆಂದು ಸ್ಥಳೀಯ ಕಾಂಗ್ರೆಸ್ ಮುಖಂಡರು

ಬೆಂಗಳೂರು, ಮಾ.19- ಮಹದೇವಪುರ ವಿಧಾನಸಭಾ ಕ್ಷೇತ್ರಕ್ಕೆ ಸ್ಥಳೀಯ ಹಾಗೂ ಸುಶಿಕ್ಷಿತ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕೆಂದು ಸ್ಥಳೀಯ ಕಾಂಗ್ರೆಸ್ ಮುಖಂಡರು ವರಿಷ್ಠರನ್ನು ಒತ್ತಾಯಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಾಜಿ ತಾಲ್ಲೂಕು ಪಂಚಾಯತ್ ಸದಸ್ಯರಾದ ಪಿ.ಎಂ.ನಾಗರಾಜ್, ಈ ಹಿಂದೆ ಕಾಂಗ್ರೆಸ್‍ನ ಭದ್ರಕೋಟೆಯಾಗಿದ್ದ ಮಹದೇವಪುರ ಇಂದು ಕಾಂಗ್ರೆಸ್ ಕಾರ್ಯಕರ್ತರ ಗೊಂದಲದಿಂದಾಗಿ ಸಂಘಟನೆಗೆ ಪೆಟ್ಟು ಬಿದ್ದಿದೆ. ಬೇರೆ ಕಡೆಯಿಂದ ಬಂದ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವುದರಿಂದ ಇಂತಹ ಪರಿಸ್ಥಿತಿಗೆ ಕಾರಣವಾಗಿದೆ ಎಂದು ಅವರು ಆರೋಪಿಸಿದರು.

2008ರ ವಿಧಾನಸಭಾ ಚುನಾವಣೆಯಲ್ಲಿ ಆನೇಕಲ್ ಕ್ಷೇತ್ರದ ನಿವಾಸಿಯಾಗಿರುವ ಬಿ ಶಿವಣ್ಣನವರಿಗೆ ಮಹದೇವಪುರ ಕ್ಷೇತ್ರದಲ್ಲಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಅವಕಾಶ ಮಾಡಿ ಕೊಟ್ಟಾಗ ಸ್ಥಳೀಯರ ವಿರೋಧದಿಂದಾಗಿ ಸೋಲು ಉಂಟಾಯಿತು. 2013 ರಲ್ಲಿ ಮತ್ತೊಮ್ಮೆ ಬ್ಯಾಟರಾಯನಪುರ ಕ್ಷೇತ್ರದ ಎ.ಸಿ ಶ್ರೀನಿವಾಸ್‍ರವರಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಿದ ಪರಿಣಾಮ ಸ್ಥಳೀಯರ ಆಕ್ರೋಶ ಮತ್ತು ವಿರೋಧದಿಂದ ಮತ್ತೆ ಸೋಲು ಉಂಟಾಗಿರುತ್ತದೆ.

ಅಲ್ಲದೆ, ಶೇಕಡಾ 50 ರಷ್ಟು ಸುಶಿಕ್ಷಿತ ಹಾಗೂ ಐಟಿ ಬಿಟಿ ಮತದಾರರನ್ನು ಹೊಂದಿರುವ ಈ ಕ್ಷೇತ್ರದಲ್ಲಿ ಸುಶಿಕ್ಷಿತ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೂಲಕ ಬಿಜೆಪಿ ಪಕ್ಷ ಎರಡು ಬಾರಿಯೂ ತಂತ್ರಗಾರಿಕೆಯನ್ನು ಹೆಣೆದಿದೆ. ಆದರೆ, ಕಾಂಗ್ರೆಸ್ ಪಕ್ಷ ಸ್ಥಳೀಯರು ಹಾಗೂ ಸುಶಿಕ್ಷಿತ ಅಭ್ಯರ್ಥಿಯನ್ನು ಕಣಕ್ಕಿಳಿಸದೇ ಇರುವ ಮೂಲಕ ಐಟಿ ಬಿಟಿ ಮತದಾರರ ಕೆಂಗಣ್ಣಿಗೂ ಗುರಿಯಾಗಬೇಕಾಯಿತು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮತ್ತೆ ಎ.ಸಿ.ಶ್ರೀನಿವಾಸ್ ಅವರಿಗೆನೇ ಟಿಕೆಟ್ ನೀಡಿದರೆ ಕಾಂಗ್ರೆಸ್‍ಗೆ ಮತ್ತೆ ಸೋಲಾಗುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಸ್ಥಳೀಯರ ಭಾವನೆಗಳನ್ನು ಅರ್ಥ ಮಾಡಿಕೊಂಡು ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹಾಗೂ ರಾಜ್ಯ ಉಸ್ತುವಾರಿ ವೇಣುಗೋಪಾಲಂ ಅವರಲ್ಲಿ ಮನವಿ ಮಾಡಿದ್ದಾರೆ.

ಈಗಾಗಲೇ ಈ ಸಂಬಂಧ ಮುಖ್ಯಮಂತ್ರಿಗಳನ್ನು ಹಾಗೂ ಕೆಪಿಸಿಸಿ ಅಧ್ಯಕ್ಷರನ್ನು ಭೇಟಿಯಾಗಿ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದ ಯತ್ನಗಳು ಫಲ ನೀಡಿಲ್ಲ. ಅದಕ್ಕಾಗಿ ಮುಖ್ಯಮಂತ್ರಿಗಳನ್ನು ಹಾಗೂ ಕೆಪಿಸಿಸಿ ಅಧ್ಯಕ್ಷರನ್ನು ಭೇಟಿಯಾಗಿ ಮನವಿ ಸಲ್ಲಿಸುವುದಾಗಿ ತಿಳಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಹಿರಿಯ ಕಾಂಗ್ರೆಸ್ ಮುಖಂಡರಾದ ಜಯಪ್ರಕಾಶ್, ಡಿಸಿಸಿ ಸದಸ್ಯರಾದ ಲಕ್ಷ್ಮಯ್ಯ ರೆಡ್ಡಿ, ವೆಂಕಟರಮಣಪ್ಪ ಹಿರಿಯ ಕಾಂಗ್ರೆಸ್ ಮುಖಂಡ, ಸಹಕಾರ ಸಂಘದ ನಿರ್ದೇಶಕರಾದ ಹೆಚ್ ಕೃಷ್ಣಪ್ಪ, ಬಿದರಹಳ್ಳಿ ಪಂಚಾಯ್ತಿ ಮಾಜಿ ಅಧ್ಯಕ್ಷರಾದ ಮಂಜುನಾಥ ರೆಡ್ಡಿ, ಕೆ.ನಾರಾಯಣಪ್ಪ , ತಾಲ್ಲೂಕು ಪಂಚಾಯ್ತಿ ಮಾಜಿ ಸದಸ್ಯರು ಸೇರಿದಂತೆ ಹಲವರು ಭಾಗವಹಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ