ಮೈಸೂರು, ಮಾ.19-ನಗರದ ಸಮೀಪದ ಐತಿಹಾಸಿಕ ಹಾಗೂ ಧಾರ್ಮಿಕ ಕ್ಷೇತ್ರವಾದ ಚಾಮುಂಡಿ ಬೆಟ್ಟದ ಪಾವಿತ್ರ್ಯತೆಗೆ ಆಗುತ್ತಿರುವ ಧಕ್ಕೆಯನ್ನು ತಪ್ಪಿಸಲು ಪೆÇಲೀಸ್ ಇಲಾಖೆ ಹಾಗೂ ಸಂಬಂಧಿತ ಅಧಿಕಾರಿಗಳು ಕ್ರಮವಹಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಚಾಮುಂಡಿ ಬೆಟ್ಟದ ಸುತ್ತಮುತ್ತ ಹಾಗೂ ತಪ್ಪಲಿನಲ್ಲಿ ಮದ್ಯವ್ಯಸನಿಗಳ ಹಾವಳಿಯಿಂದಾಗಿ ಎಲ್ಲೆಂದರಲ್ಲಿ ಮದ್ಯದ ಬಾಟಲಿಗಳು ಹಾಗೂ ಪ್ಲಾಸ್ಟಿಕ್ ವಸ್ತುಗಳ ತ್ಯಾಜ್ಯವೇ ತುಂಬಿಹೋಗಿದ್ದು, ಪವಿತ್ರ ಕ್ಷೇತ್ರವನ್ನು ಕಲುಷಿತಗೊಳಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಇತ್ತೀಚೆಗಷ್ಟೇ ಬೆಟ್ಟದ ಚಾಮುಂಡೇಶ್ವರಿ ದೇವಾಲಯದಲ್ಲಿ ಸೂಕ್ತ ವ್ಯವಸ್ಥೆ ಇಲ್ಲದ ಬಗ್ಗೆ ಬಂದ ದೂರಿನ ಹಿನ್ನೆಲೆಯಲ್ಲಿ ಅಲ್ಲಿಗೆ ಭೇಟಿ ನೀಡಿದ್ದ ನಿವೃತ್ತ ಉಪಲೋಕಾಯುಕ್ತ ಸುಭಾಷ್ ಬಿ. ಅಡಿ ಅವರು ಪೂಜಾ ಕೈಂಕರ್ಯಗಳೂ ಸೇರಿದಂತೆ ಎಲ್ಲಾ ರೀತಿಯ ವ್ಯವಸ್ಥೆಯನ್ನು ಸರಿಪಡಿಸಿ ಅದಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಯನ್ನು ಸುಸೂತ್ರಗೊಳಿಸಿದ್ದರು.
ಇದರಿಂದ ನಿಟ್ಟುಸಿರು ಬಿಟ್ಟಿದ್ದ ಭಕ್ತರು ಮತ್ತೆ ದೇವಾಲಯದ ಸುತ್ತಮುತ್ತಲಿನ ವಾತಾವರಣವನ್ನು ಕಲುಷಿತಗೊಳಿಸುತ್ತಿರುವವರ ವಿರುದ್ಧ ಕ್ರಮ ವಹಿಸುವಂತೆ ಆಗ್ರಹಿಸುತ್ತಿದ್ದಾರೆ.
ಚಾಮುಂಡಿ ಬೆಟ್ಟದ ಸುತ್ತಮುತ್ತಲಿನ ಪ್ರದೇಶದ, ಮೆಟ್ಟಿಲುಗಳ ಆಸುಪಾಸು, ಬೆಟ್ಟದ ತಪ್ಪಲಿನಲ್ಲಿ ಕಾಲೇಜು ವಿದ್ಯಾರ್ಥಿಗಳು ಹಾಗೂ ಖಾಸಗಿ ಸಂಸ್ಥೆಗಳ ಸಹಯೋಗದಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೆ ನಡೆಸಿದ ಸ್ವಚ್ಛತಾ ಕಾರ್ಯದಲ್ಲಿ 30ಕ್ಕೂ ಹೆಚ್ಚು ಬ್ಯಾಗ್ಗಳಷ್ಟು ಮದ್ಯದ ಬಾಟಲಿ ಹಾಗೂ ಪ್ಲ್ಯಾಸ್ಟಿಕ್ ತ್ಯಾಜ್ಯ ದೊರೆತಿದೆ.
ಪ್ಲ್ಯಾಸ್ಟಿಕ್ನ್ನು ನಿಷೇಧಿಸಿರುವ ನಡುವೆಯೂ ಅವ್ಯಾಹತವಾಗಿ ಪ್ಲ್ಯಾಸ್ಟಿಕ್ ಬಳಕೆಯಾಗುತ್ತಿರುವುದು, ಮದ್ಯವ್ಯಸನಿಗಳ ಕಾಟ ತಪ್ಪಿಸಿ ಚಾಮುಂಡಿ ಬೆಟ್ಟದ ಸುತ್ತಮುತ್ತಲಿನ ಸ್ಥಳದಲ್ಲೂ ಯಾವುದೇ ರೀತಿಯ ಪವಿತ್ರತೆಗೆ ಧಕ್ಕೆಯಾಗದಂತೆ ಎಚ್ಚರಿಕೆ ವಹಿಸಬೇಕಾಗಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಈ ಹಿಂದೆ ಪೆÇಲೀಸರು ಆಪರೇಷನ್ ಚಾಮುಂಡಿ ಎಂಬ ಹೆಸರಿನಲ್ಲಿ ನಡೆಸುತ್ತಿದ್ದ ಕಾರ್ಯಾಚರಣೆಯಿಂದಾಗಿ ಬೆಟ್ಟಕ್ಕೆ ಸಂಜೆ ಮತ್ತು ರಾತ್ರಿ ವೇಳೆ ತೆರಳುತ್ತಿದ್ದವರನ್ನು ತಪಾಸಣೆಗೊಳಪಡಿಸಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಕುಡುಕರು, ಮೋಜು ಮಸ್ತಿ ಮಾಡುವವರು ಬೆಟ್ಟಕ್ಕೆ ತೆರಳಲು ಸಾಧ್ಯವಾಗುತ್ತಿರಲಿಲ್ಲ. ಇತ್ತೀಚೆಗೆ ಈ ಕಾರ್ಯಾಚರಣೆ ಸ್ಥಗಿತಗೊಳಿಸಿರುವುದರಿಂದ ಮದ್ಯ ವ್ಯಸನಿಗಳ ಆರ್ಭಟ ಹೆಚ್ಚಿದ್ದು, ಅದರಲ್ಲೂ ದೇವಾಲಯದ ಸುತ್ತಮುತ್ತಲ ಪ್ರದೇಶದಲ್ಲಿ ಇಂತಹ ಕೃತ್ಯಗಳಿಗೆ ಎಡೆಮಾಡಿಕೊಡುತ್ತಿದೆ. ಇದನ್ನು ಕೂಡಲೇ ತಪ್ಪಿಸಿ ಭಕ್ತರಿಗೆ ಅನುಕೂಲ ಕಲ್ಪಿಸುವಂತೆ ಒತ್ತಾಯಿಸಿದ್ದಾರೆ.