ಶಾಸಕರ ಅನರ್ಹತೆ ಪ್ರಕರಣ: ತೀರ್ಪು ನಮ್ಮ ಪರ ಬರುವ ವಿಶ್ವಾಸವಿದೆ :ಚಲುವರಾಯಸ್ವಾಮಿ

 

ಬೆಂಗಳೂರು, ಮಾ.19-ಶಾಸಕರ ಅನರ್ಹತೆ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ನಮ್ಮ ಪರ ಬರುವ ವಿಶ್ವಾಸ ನಮಗಿದೆ ಎಂದು ಚಲುವರಾಯಸ್ವಾಮಿ ಇಂದಿಲ್ಲಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಕಾನೂನು ಉಲ್ಲಂಘಿಸಿಲ್ಲ. ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕುವುದನ್ನು ತೋರಿಸಿಯೇ ಹಾಕಿದ್ದೇವೆ. ವಿಪ್‍ನ್ನು ನಾವು ಉಲ್ಲಂಘಿಸಿಲ್ಲ ಎಂದು ಹೇಳಿದರು.

ನಮ್ಮ ವಕೀಲರು ಸಮರ್ಥವಾಗಿ ವಾದ ಮಂಡಿಸಿದ್ದಾರೆ. ನಮ್ಮ ಪರವಾಗಿ ತೀರ್ಪು ಬರುವ ಭರವಸೆ ನಮಗಿದೆ ಎಂದರು.

ದೇವೇಗೌಡರು ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸಿ ನಮಗೆ ತೊಂದರೆ ಕೊಟ್ಟು ಅವರಿಗೆ ಒಳ್ಳೆಯದಾಗುತ್ತದೆ ಎನ್ನುವುದಾದರೆ ಕೊಡಲಿ, ನಾವು ಅದನ್ನು ಎದುರಿಸಲು ಸಿದ್ಧ. ಅವರು ದೊಡ್ಡವರು ಎಂದು ನುಡಿದರು.

ಸಮ್ಮಿಶ್ರ ಸರ್ಕಾರದಲ್ಲಿ ಬಿಜೆಪಿ ಜೊತೆ ಜೆಡಿಎಸ್ ಅಧಿಕಾರದಲ್ಲಿದ್ದಾಗ ಎಲ್ಲಾ ಶಾಸಕರನ್ನು ಅನರ್ಹಗೊಳಿಸಬೇಕು ಎಂದು ಅಂದಿನ ಸ್ಪೀಕರ್ ಕೃಷ್ಣ ಅವರಿಗೆ ದೇವೇಗೌಡರು ದೂರು ಕೊಟ್ಟರು. ಅದಾದ ಹದಿನೈದು ದಿನಗಳಲ್ಲೇ ರೇವಣ್ಣ ಸಚಿವರಾದರು ಎಂದು ಹೇಳಿದರು.

ರಾಮಕೃಷ್ಣ ಹೆಗಡೆ ಅವರ ಕಾಲದಲ್ಲಿ ದೇವೇಗೌಡರು ಜನತಾದಳ ಬಿಟ್ಟರು. ಆಗ ಹೆಗಡೆಯವರು ಇವರ ವಿರುದ್ಧ ಸೇಡು ತೀರಿಸಿಕೊಂಡರಾ ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್‍ನಿಂದ ಎ.ಎಸ್.ನಡಹಳ್ಳಿ ಹೊರಹೋಗಿದ್ದಾರೆ. ಕಾಂಗ್ರೆಸ್‍ನವರು ಅವರ ಮೇಲೆ ಬಿದ್ದಿದ್ದಾರಾ? ಎಂದರು.

ನಾವು ದೇವೇಗೌಡರ ವಿರುದ್ಧ ಲಘುವಾಗಿ ಮಾತನಾಡುವುದಿಲ್ಲ ಎಂದು ಪುನರುಚ್ಚರಿಸಿದರು.
ಜಮೀರ್ ಅಹಮ್ಮದ್ ಮಾತನಾಡಿ, ಇದೇ ತಿಂಗಳು ನಡೆಯಲಿರುವ ರಾಜ್ಯಸಭಾ ಚುನಾವಣೆಗೆ ಯಾವುದೇ ವಿಪ್ ಬಂದಿಲ್ಲ. ಬಂದರೆ ನೋಡೋಣ ಎಂದಷ್ಟೇ ಚುಟುಕಾಗಿ ಉತ್ತರಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ