ಬೆಂಗಳೂರು, ಮಾ.19-ವಿಧಾನಸಭೆ ಚುನಾವಣೆಗೆ ಭರ್ಜರಿ ತಯಾರಿ ನಡೆಸಿರುವ ಬಿಜೆಪಿ ರಾಜ್ಯದ ಸುಮಾರು 150 ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ಪಟ್ಟಿ ಅಂತಿಮಗೊಂಡಿದ್ದು , ಇಂದು ಕೇಂದ್ರ ವರಿಷ್ಠರ ಕೈ ಸೇರಿದೆ.
ಐದು ದಿನಗಳ ಹಿಂದೆ ರಾಜ್ಯಕ್ಕೆ ಆಗಮಿಸಿದ್ದ 56 ಮಂದಿ ನೇತೃತ್ವದ ತಂಡ 224 ವಿಧಾನಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಸಂಬಂಧ ಕಾರ್ಯಕರ್ತರು ಹಾಗೂ ಆರ್‍ಎಸ್‍ಎಸ್ ವರಿಷ್ಠರಿಂದ ಅಭಿಪ್ರಾಯ ಪಡೆದಿದ್ದಾರೆ.
ಇಂದು ಸಂಜೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರಿಗೆ ಈ ತಂಡ ವರದಿ ನೀಡಲಿದ್ದು , 150 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ ಎಂದು ತಿಳಿದುಬಂದಿದೆ.
ರಾಜ್ಯಕ್ಕೆ ಆಗಮಿಸಿದ್ದ ಬೋಪೇಂದ್ರ ಯಾದವ್, ಎಲ್.ಗಣೇಶನ್, ರಾಜು ಪ್ರತಾಪ್ ರೂಡಿ ಬೆಂಗಳೂರು ವಿಭಾಗ, ಮೈಸೂರಿನಲ್ಲಿ ರಾಜೇಂದ್ರ ಅಗರ್‍ವಾಲ್, ಗಣೇಶ್ ಮಾನಸಿನ್, ಮಂಗಳೂರಿನಲ್ಲಿ ಅರುಣ್ ಸಿಂಗ್, ಕೋಲಾರದಲ್ಲಿ ತಾವರ್‍ಚಂದ್ ಗೆಲ್ಹೋಟ್, ತುಮಕೂರಿನಲ್ಲಿ ಜೆಪಿ ನಡ್ಡಾ , ಹುಬ್ಬಳ್ಳಿಯಲ್ಲಿ ಡಾ.ಹರ್ಷವರ್ಧನ್ ಸೇರಿದಂತೆ ಒಟ್ಟು 56 ಮಂದಿ ತಂಡ ಕಾರ್ಯಕರ್ತರಿಂದ ಅಭಿಪ್ರಾಯ ಸಂಗ್ರಹಿಸಿದೆ.
ಎ ಬಿ ಮತ್ತು ಸಿ ಎಂದು ಮೂರು ಗುಂಪುಗಳನ್ನಾಗಿ ಮಾಡಿರುವ ತಂಡ ಇದರಲ್ಲಿ ಗೆದ್ದೇ ಗೆಲ್ಲುತ್ತೇವೆ ಎಂದು ನಂಬಿಕೊಂಡಿರುವ 74 ವಿಧಾನಸಭಾ ಕ್ಷೇತ್ರಗಳಿಗೆ ಓರ್ವ ಅಭ್ಯರ್ಥಿಯನ್ನು ಕಣಕ್ಕಿಳಿಸುವಂತೆ ಶಿಫಾರಸ್ಸು ಮಾಡಲಿವೆ.
ಬಿ ವಿಭಾಗದ 50 ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸ ಶೇ.75ರಷ್ಟಿದ್ದು , ಈ ಕ್ಷೇತ್ರಗಳಿಗೆ ಎರಡರಿಂದ ಮೂವರು ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. ಈ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರ ಹಣಾಹಣಿ ಇದ್ದು , ಹೆಚ್ಚಿನ ಶ್ರಮ ವಹಿಸಿದರೆ ಇಲ್ಲಿಯೂ ಕೂಡ ಗೆಲುವು ಸಾಧಿಸಬಹುದೆಂದು ತಂಡ ಸಲಹೆ ಮಾಡಲಿದೆ.
ಉಳಿದಿರುವ 25 ಕ್ಷೇತ್ರಗಳಲ್ಲಿ ಗೆಲುವಿನ ಸಾಧ್ಯತೆ ಶೇ.50-50 ಎಂದು ನಿರ್ಧರಿಸಲಾಗಿದೆ. ಇಂತಹ ಕ್ಷೇತ್ರಗಳಿಗೆ 4ರಿಂದ 5 ಅಭ್ಯರ್ಥಿಗಳನ್ನು ಅಖೈರು ಮಾಡಲಾಗಿದೆ.
ಈ 25 ಕ್ಷೇತ್ರಗಳಲ್ಲಿ ತ್ರಿಕೋನ ಸ್ಪರ್ಧೆ ಅಂದರೆ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಸ್ಪರ್ಧೆ ಉಂಟಾಗಲಿದೆ. ಇಂತಹ ಕ್ಷೇತ್ರಗಳಿಗೆ ಚುನಾವಣಾ ದಿನಾಂಕ ಘೋಷಣೆಯಾದ ಬಳಿಕ ಅಭ್ಯರ್ಥಿಗಳ ಆಯ್ಕೆಯನ್ನು ಅಂತಿಮಗೊಳಿಸುವಂತೆ ಸಲಹೆ ಮಾಡಲಿದ್ದಾರೆ.
74 ಕ್ಷೇತ್ರಗಳಿಗೆ ನೀವೇ ಆಯ್ಕೆ ಮಾಡಿ:
150 ಅಭ್ಯರ್ಥಿಗಳ ಪಟ್ಟಿಯನ್ನು ಆಯ್ಕೆ ಮಾಡಿರುವ ಕೇಂದ್ರ ನಾಯಕರು ಉಳಿದಿರುವ 74 ವಿಧಾನಸಭಾ ಕ್ಷೇತ್ರಗಳಿಗೆ ನೀವೆ ಆಯ್ಕೆ ಮಾಡುವಂತೆ ಸೂಚಿಸಿದ್ದಾರೆ.
ಇದರಲ್ಲಿ ಬಿಜೆಪಿ ಸಂಘಟನೆ ಕೊರತೆ ಎದುರಿಸುತ್ತಿರುವ ಚಿಕ್ಕಬಳ್ಳಾಪುರ, ಕೋಲಾರ, ಹಾಸನ, ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿ ಇನ್ನೊಂದು ಬಾರಿ ಸಮೀಕ್ಷೆ ಆಧರಿಸಿ ಟಿಕೆಟ್ ನೀಡಬೇಕೆಂಬ ಅಭಿಪ್ರಾಯ ವ್ಯಕ್ತವಾಗಿದೆ.
ಈ ಭಾಗಗಳಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಬಿರುಸಿನ ಸ್ಪರ್ಧೆ ಇರುವುದರಿಂದ ಆರ್‍ಎಸ್‍ಎಸ್ ನಾಯಕರ ಸಲಹೆ ಪಡೆದು ಪಟ್ಟಿಯನ್ನು ಅಂತಿಮಗೊಳಿಸಬೇಕೆಂದು ಕೇಂದ್ರ ನಾಯಕರು ಶಿಫಾರಸು ಮಾಡಲಿದ್ದಾರೆ.
ಹಾಲಿ ಶಾಸಕರಿಗೆ ಟಿಕೆಟ್:
ಬಹುತೇಕ ಹಾಲಿ ಎಲ್ಲ ಶಾಸಕರಿಗೆ ಟಿಕೆಟ್ ನೀಡಲು ಬಿಜೆಪಿ ಮುಂದಾಗಿದೆ. ಅಲ್ಲದೆ ಬೇರೆ ಬೇರೆ ಪಕ್ಷಗಳಿಂದ ಬಂದವರಿಗೂ ಟಿಕೆಟ್ ಖಾತರಿಯಾಗಿದೆ. ವಿರಾಜಪೇಟೆಯ ಕೆ.ಜಿ.ಬೋಪಯ್ಯ ಹೊರತುಪಡಿಸಿದರೆ ಬಹುತೇಕ ಎಲ್ಲರಿಗೂ ಟಿಕೆಟ್ ಮೊದಲ ಸುತ್ತಿನಲ್ಲಿ ಘೋಷಣೆಯಾಗಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಉಳಿದಂತೆ ಮುಂದಿನ ದಿನಗಳಲ್ಲಿ ಅನ್ಯ ಪಕ್ಷದಿಂದ ಬರುವವರಿಗೆ ಪರಿಸ್ಥಿತಿ ನೋಡಿಕೊಂಡು ಟಿಕೆಟ್ ಘೋಷಣೆಯಾಗಲಿದೆ.