ಬೆಂಗಳೂರು, ಮಾ.17- ಸ್ಯಾಂಡಲ್ವುಡ್ನ ಇಬ್ಬರು ಪ್ರಖ್ಯಾತ ನಟರಿಗಿಂದು ಹುಟ್ಟುಹಬ್ಬದ ಸಂಭ್ರಮ. ಪವರ್ಸ್ಟಾರ್ ಪುನೀತ್ರಾಜ್ಕುಮಾರ್ 43ನೇ ವಸಂತಕ್ಕೆ ಕಾಲಿಡುತ್ತಿದ್ದರೆ, ನವರಸನಾಯಕ ಜಗ್ಗೇಶ್ 55ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ.
ರಾತ್ರಿಯಿಂದಲೇ ಅಪ್ಪು ಅಭಿಮಾನಿಗಳು ಮನೆ ಮುಂದೆ ಜಮಾಯಿಸಿ ಕೇಕ್ ಕತ್ತರಿಸುವ ಮೂಲಕ ನೆಚ್ಚಿನ ನಟನಿಗೆ ಶುಭಾಶಯ ಕೋರಿದರು. ಬಾಲನಟನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಪುನೀತ್ರಾಜ್ಕುಮಾರ್ ಅವರು ಅಪ್ಪು, ಅಭಿ, ರಾಜಕುಮಾರ, ವಂಶಿ, ಮೌರ್ಯ, ವೀರಕನ್ನಡಿಗ, ಜಾಕಿ, ಮಿಲನ, ಅಂಜನಿಪುತ್ರ ಸೇರಿದಂತೆ ಹಲವಾರು ಹಿಟ್ ಚಿತ್ರಗಳಲ್ಲಿ ನಟಿಸಿ ಪ್ರೇಕ್ಷಕರ ಮನದಲ್ಲಿ ಮನೆ ಮಾಡಿದ್ದಾರೆ.
ಈ ಬಾರಿಯ ಹುಟ್ಟುಹಬ್ಬದ ವಿಶೇಷ ದಿನದಂದು ನಟಸಾರ್ವಭೌಮ ಚಿತ್ರದ ಟೀಜರ್ ಕೂಡ ಬಿಡುಗಡೆ ಮಾಡುವ ಮೂಲಕ ಅಭಿಮಾನಿಗಳಿಗೆ ಕೊಡುಗೆ ನೀಡಿದ್ದಾರೆ.
ಹ್ಯಾಟ್ರೀಕ್ ಹೀರೋ ಶಿವರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್ ಅಪ್ಪುಗೆ ಸಿಹಿ ತಿನ್ನಿಸಿ ಹುಟ್ಟುಹಬ್ಬದ ಶುಭ ಕೋರಿದರು.
ಪವರ್ಸ್ಟಾರ್ ಎಂದು ಟೈಟಲ್ ಕೊಟ್ಟಿದ್ದು ನಾನೇ. ಅವರ ಹೆಸರಿನಲ್ಲಿರುವಂತೆ 42 ವರ್ಷವಾದರೂ ಅದೇ ಎನರ್ಜಿ ಅವರಲ್ಲಿದೆ. ದೇವರು ಮತ್ತಷ್ಟು ಆಯುರ್ ಆರೋಗ್ಯ ಕರುಣಿಸಲಿ. ನಮ್ಮ ತಂದೆಯವರಿಗೆ ಅಭಿಮಾನಿಗಳು ಯಾವ ರೀತಿ ಪೆÇ್ರೀ ಸಹಕಾರ ನೀಡಿದ್ದಾರೋ ಅದೇ ರೀತಿ ಅಪ್ಪುಗೂ ನೀಡಿ ಎಂದು ಶಿವಣ್ಣ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.
ಕಿರುತೆರೆಯಲ್ಲೂ ಹಲವಾರು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಡುತ್ತಿರುವ ಅಪ್ಪು, ಕನ್ನಡಿಗರ ಮನೆ ಮಾತಾಗಿದ್ದಾರೆ.
ನವರಸ ನಾಯಕ ಜಗ್ಗೇಶ್ ಕೂಡ ಇಂದು 55ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಪ್ರತಿ ವರ್ಷ ರಾಯರ ಸನ್ನಿಧಿ ಮಂತ್ರಾಲಯಕ್ಕೆ ಹೋಗಿ ಪೂಜೆ ಸಲ್ಲಿಸುತ್ತಿದ್ದರು. ಆದರೆ ಈ ಬಾರಿ ಕೊಲ್ಲೂರು ಮೂಕಾಂಬಿಕೆಗೆ ಪೂಜೆ ಸಲ್ಲಿಸಿದ್ದು ವಿಶೇಷ.
ಪಟ್ಟಣಕ್ಕೆ ಬಂದ ಪುಟ್ಟ, ಭಂಡ ನನಗಂಡ, ರುಪಾಯಿರಾಜ, ಸರ್ವರ್ ಸೋಮಣ್ಣ, ಎದ್ದೇಳು ಮಂಜುನಾಥ, ಮಠ, ನೀರ್ದೋಸೆ, ವಾಸ್ತುಪ್ರಕಾರ ಹೀಗೆ ಹಲವಾರು ಚಿತ್ರಗಳಲ್ಲಿ ನಟಿಸಿ ಪ್ರೇಕ್ಷಕರಿಗೆ ಹಾಸ್ಯವನ್ನು ಉಣಬಡಿಸಿದ್ದಾರೆ. ಕೇವಲ ಚಿತ್ರರಂಗದಲ್ಲೇ ಅಲ್ಲದೆ ರಾಜಕೀಯದಲ್ಲೂ ಸಹ ಜಗ್ಗೇಶ್ ಮನೆ ಮಾತಾಗಿದ್ದಾರೆ.
ಕಿರುತೆರೆಯಲ್ಲಿ ಪ್ರಸಾರವಾಗುವ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದಲ್ಲಿ ಜಗ್ಗೇಶ್ ತೀರ್ಪುಗಾರರಾಗಿ ಜನಪ್ರಿಯತೆ ಗಳಿಸಿದ್ದಾರೆ.
ಚಿತ್ರರಂಗದ ಹಿರಿಯ ನಟರು, ಅಭಿಮಾನಿಗಳು ನವರಸ ನಾಯಕನಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.