ನವದೆಹಲಿ, ಮಾ.17- ಉತ್ಪಾದನಾ ವೆಚ್ಚಕ್ಕಿಂತ ಕನಿಷ್ಠ ಒಂದೂವರೆ ಪಟ್ಟುಗಳಷ್ಟು ಹೆಚ್ಚಿಗೆ ಬೆಳೆಗಳ ಗರಿಷ್ಠ ಮಾರಾಟ ದರವನ್ನು (ಎಂಎಸ್ಪಿ) ಕೇಂದ್ರ ಸರ್ಕಾರ ನಿಗದಿಗೊಳಿಸಲಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಪ್ರಕಟಿತ ಎಂಎಸ್ಪಿ ಪ್ರಯೋಜನಗಳು ದೇಶದ ರೈತರಿಗೆ ದಕ್ಕುವಂತಾಗಲು ರಾಜ್ಯಗಳೊಂದಿಗೆ ಕೇಂದ್ರ ಸರ್ಕಾರ ಕಾರ್ಯೋನ್ಮುಖವಾಗಿದೆ ಎಂದು ಅವರು ತಿಳಿಸಿದ್ದಾರೆ.
ರಾಜಧಾನಿ ದೆಹಲಿಯ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯಲ್ಲಿ ಇಂದು ವಾರ್ಷಿಕ ಕೃಷಿ ಉನ್ನತಿ ಮೇಳದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರೈತರು ತಮ್ಮ ಬೆಳೆಗಳಿಗೆ ಯೂರಿಯಾ ಬಳಕೆಯನ್ನು ಕಡಿಮೆ ಮಾಡಬೇಕು ಎಂದು ಕರೆ ನೀಡಿದ ಅವರು, ಖಾದ್ಯ ತೈಲಗಳ ಆಮದುಗಳನ್ನು ಕಡಿಮೆ ಮಾಡಲು ತೈಲ ಬೀಜಗಳ ಉತ್ಪಾದನೆಯನ್ನು ಹೆಚ್ಚಿಸುವಂತೆ ಸಲಹೆ ಮಾಡಿದರು.
ದೇಶದ ಕೃಷಿಕರ ಹಿತಾಸಕ್ತಿ ರಕ್ಷಣೆಗೆ ತಮ್ಮ ಸರ್ಕಾರ ಸಂಪೂರ್ಣ ಬದ್ಧವಾಗಿದೆ ಎಂದು ಪುನರುಚ್ಚರಿಸಿದ ಅವರು, ರೈತರ ಅನುಕೂಲಕ್ಕಾಗಿ ಬಜೆಟ್ನಲ್ಲಿ ಈಗಾಗಲೇ ಸಾಕಷ್ಟು ಉತ್ತಮ ಯೋಜನೆಗಳನ್ನು ಪ್ರಕಟಿಸಲಾಗಿದೆ ಎಂದರು.
ಮೋದಿ ಅವರು ಇದೇ ಸಂದರ್ಭದಲ್ಲಿ ಸಾವಯವ ಕೃಷಿ ಕುರಿತ ಸುದ್ದಿ ಜಾಲ ಹಾಗೂ 25 ಕೃಷಿ ವಿಜ್ಞಾನ ಕೇಂದ್ರಗಳ ಸ್ಥಾಪನೆಗೆ ಶಿಲಾನ್ಯಾಸ ನೆರವೇರಿಸಿದರು.
ಕೃಷಿ ಕ್ಷೇತ್ರದಲ್ಲಿ ಶ್ರೇಷ್ಠ ಸಾಧನೆ ಮಾಡಿದ ಸಾಧಕರಿಗೆ ಅವರು ಕೃಷಿ ಕರ್ಮಣ್ ಹಾಗೂ ದೀನ್ ದಯಾಳ್ ಉಪಾದ್ಯಾಯ ಕೃಷಿ ವಿಜ್ಞಾನ ಪೆÇ್ರೀ ಪ್ರಶಸ್ತಿಗಳನ್ನು ನೀಡಿದರು.