ಬೆಂಗಳೂರು, ಮಾ.17- ಜನಪ್ರತಿನಿಧಿಗಳಲ್ಲಿ ತಪ್ಪಿನ ಅರಿವು ಮೂಡಿಸಲು ನೋಟ ಆಯ್ಕೆ ಮೂಲಕ ಶಾಂತಿಯುತ ಆಂದೋಲನ ನಡೆಸಿ ಅವರಿಗೆ ಬುದ್ಧಿ ಕಲಿಸಬೇಕು ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ಇಂದಿಲ್ಲಿ ಕರೆ ನೀಡಿದರು.
ಬೆಂಗಳೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಆವರಣದಲ್ಲಿ ನಡೆದ ಆರೋಗ್ಯ ರಾಯಭಾರಿಗಳ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಸಮಾಜ ಸುಧಾರಣೆಗೆ ಇಂತಹ ಆಯ್ಕೆ ಅಗತ್ಯವಾಗಿದೆ. ಹಾಗಾಗಿ ಅಗತ್ಯವಿದ್ದೆಡೆ ಈ ಬಾರಿ ಚುನಾವಣೆಯಲ್ಲಿ ನೋಟ ಒತ್ತುವ ಮೂಲಕ ಜನಪ್ರತಿನಿಧಿಗಳಿಗೆ ಪಾಠ ಕಲಿಸಬೇಕಿದೆ ಎಂದರು.
ಚುನಾವಣೆ ನಂತರ ಜನರು ಏನಾದರೂ ಸೌಲಭ್ಯ ಪಡೆಯಬೇಕೆಂದರೆ ಜನಪ್ರತಿನಿಧಿಗಳನ್ನು ಕಾಡಿ ಬೇಡುವ ಪರಿಸ್ಥಿತಿ ಇದೆ. ಆದ್ದರಿಂದ ನಾವೆಲ್ಲರೂ ಶಾಂತಿಯುತ ಆಂದೋಲನ ಕೈಗೊಳ್ಳಲೇಬೇಕಾಗಿದೆ ಎಂದು ತಿಳಿಸಿದರು.
ಒಂದು ದಿನದ ಲೋಕಸಭಾ ಕಲಾಪಕ್ಕೆ 10 ಕೋಟಿ ರೂ. ವೆಚ್ಚವಾಗುತ್ತದೆ. ಇಂತಹ ಪರಿಸ್ಥಿತಿ ಇದ್ದರೂ ಮತದಾರರನ್ನೇ ಯಾರು ಎಂದು ಪ್ರಶ್ನಿಸುತ್ತಾರೆ. ಆಡಳಿತಾರೂಢ ಸರ್ಕಾರ ಎಷ್ಟೇ ಒಳ್ಳೆಯ ಮಸೂದೆ ಮಂಡಿಸಿದರೂ ವಿರೋಧ ಪಕ್ಷಗಳು ಅದನ್ನು ತಿರಸ್ಕರಿಸುತ್ತವೆ. ಆದರೆ, ಸಂಬಳ ಕುರಿತ ಮಸೂದೆಗಳು ಮಾತ್ರ ಪಾಸ್ ಆಗುತ್ತವೆ. ಬೇರೆ ಯಾವುದೇ ಮಸೂದೆಗಳು ಪಾಸಾಗದಂತಹ ಸ್ಥಿತಿಯಲ್ಲಿ ನಾವಿದ್ದೇವೆ ಎಂದು ವಿಷಾದಿಸಿದರು.
ಪ್ರಜಾಪ್ರಭುತ್ವ ಯಾವುದೇ ಪಂಗಡಕ್ಕೂ ಸೀಮಿತವಲ್ಲ. ಪ್ರತಿಯೊಬ್ಬರೂ ಸಮಾಜವನ್ನು ಉತ್ತಮಪಡಿಸುವ ಹೊಣೆಗಾರಿಕೆ ಹೊಂದಿದ್ದಾರೆ. ಆದ್ದರಿಂದ ವೈದ್ಯರಾದವರು ಹೆಚ್ಚಿನ ಜವಾಬ್ದಾರಿ ಹೊರಬೇಕು. ಇಂದು ಮನುಷ್ಯ ಸಾಯುವಂತಹ ಪರಿಸ್ಥಿತಿ ಇದ್ದರೂ ಅವರನ್ನು ಉಳಿಸುವಲ್ಲಿ ನಿರ್ಲಕ್ಷ್ಯ ವಹಿಸಲಾಗುತ್ತಿದೆ. ಮುಂದಿನ ಪರಿಣಾಮ ಎದುರಿಸುವ ಜ್ಞಾನ ಮತ್ತು ನಿರ್ಧಾರಗಳು ಇರಬೇಕು ಎಂದು ಕಿವಿಮಾತು ಹೇಳಿದರು.
ಇಂದಿನ ಅಧಿಕಾರಿಗಳು ಎಷ್ಟೇ ದೊಡ್ಡ ಹುದ್ದೆಯಲ್ಲಿದ್ದರೂ, ಉತ್ತಮ ವೇತನ ದೊರೆತರೂ ಲಂಚಕ್ಕೆ ಮೊರೆ ಹೋಗುತ್ತಾರೆ. ಅಲ್ಲದೆ, ಅವರ ಸಮುದಾಯವನ್ನು ಬೆಳೆಸುವುದೇ ಮುಖ್ಯವೆಂದು ಭಾವಿಸಿರುತ್ತಾರೆ. ಇಂದು ಅಧಿಕಾರಿಗಳು ಜನತಾ ಸೇವಕರಾಗಿಲ್ಲ. ಬದಲಿಗೆ ಜನರ ಮಾಲೀಕರೆಂಬಂತೆ ವರ್ತಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಾನು ಸುಮಾರು 1500ಕ್ಕೂ ಹೆಚ್ಚು ಶಾಲಾ-ಕಾಲೇಜು, ಸಂಘ-ಸಂಸ್ಥೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಮುಕ್ತವಾಗಿ ಭ್ರಷ್ಟಾಚಾರ ನಿರ್ಮೂಲನೆ ಕುರಿತಂತೆ ಸಂವಾದ ನಡೆಸಿದ್ದೇನೆ. ಈ ಮೂಲಕ ಅವರಲ್ಲಿ ಮಾನವೀಯ ಮೌಲ್ಯದ ಅರಿವು ಮೂಡಿಸಲು ಪ್ರಯತ್ನಿಸುತ್ತಿದ್ದೇನೆ ಎಂದು ಹೇಳಿದರು.
ತೃಪ್ತಿ ಮತ್ತು ಮಾನವೀಯ ಮೌಲ್ಯಗಳನ್ನು ಇಂದು ನಾವು ಕಳೆದುಕೊಂಡಿದ್ದೇವೆ. ಶ್ರಮಿಕರ ಬೆವರಿನ ಹಣ ಕಿತ್ತುಕೊಳ್ಳುವುದರಲ್ಲೇ ಸಂತೋಷಪಡುತ್ತಿರುವುದು ದುರದೃಷ್ಟಕರ ಎಂದರು.
ದೇಶದಲ್ಲಿ ಲಕ್ಷಾಂತರ ಕೋಟಿ ರೂ. ಮೊತ್ತದ ಹಗರಣಗಳು ನಡೆದಿವೆ. 2010ರಲ್ಲಿ 70 ಸಾವಿರ ಕೋಟಿ ಮೌಲ್ಯದ ಕಾಮನ್ವೆಲ್ತ್ ಹಗರಣ, 1.85 ಲಕ್ಷ ಕೋಟಿ ರೂ.ಗಳ ಕಲ್ಲಿದ್ದಲು ಹಗರಣ, 1.76 ಲಕ್ಷ ಕೋಟಿ ರೂ.ಗಳ 2ಜಿ ಹಗರಣ, ಎಲ್ಐಸಿ ಹೌಸಿಂಗ್ ಲೋನ್ ಹಗರಣ ಹೀಗೆ ಹಲವಾರು ಹಗರಣಗಳ ದೊಟ್ಟ ಪಟ್ಟಿಯೇ ಇವೆ. ಆದರೆ, ಕೆಲವು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನಡೆಸಿರುವ ಭ್ರಷ್ಟಾಚಾರ ಇದಕ್ಕೂ ಮೀರಿರುವುದು ಆಘಾತಕಾರಿ ಎಂದು ಹೇಳಿದರು.
ದೇವರಾಜ ಅರಸು ಸಂಶೋಧನಾ ಸಂಸ್ಥೆಯ ಡಾ.ಎಸ್.ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.