ಕನ್ನಡಪರ ಸಂಘಟನೆ ದಲಿತ, ರೈತ ಸಂಘಟನೆಗಳ ಮುಖಂಡರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಬೇಕು: ವಾಟಾಳ್ ನಾಗರಾಜ್ ಕರೆ

ಬೆಂಗಳೂರು,ಮಾ.17-ಕನ್ನಡದ ಉಳಿವಿಗಾಗಿ ನಿರಂತರವಾಗಿ ಹೋರಾಟ ಮಾಡಿರುವ ಕನ್ನಡಪರ ಸಂಘಟನೆ ದಲಿತ, ರೈತ ಸಂಘಟನೆಗಳ ಮುಖಂಡರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂದು ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಕರೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡಪರ ಸಂಘಟನೆಗಳು ಕನ್ನಡದ ಉಳಿವಿಗಾಗಿ ನಿರಂತರ ಹೋರಾಟ ನಡೆಸಿಕೊಂಡು ಬಂದಿವೆ. ಇದರೊಂದಿಗೆ ದಲಿತ ಸಂಘಟನೆಗಳು, ರೈತ ಸಂಘಟನೆಗಳು ಹೋರಾಟ ನಡೆಸುವ ಮೂಲಕ ರಾಜ್ಯದ ಅಭಿವೃದ್ದಿಗೆ ಶ್ರಮಿಸುತ್ತಾ ಬಂದಿವೆ ಎಂದು ಹೇಳಿದರು.

ಸಂಘಟನೆಗಳ ಶಕ್ತಿಯನ್ನು ರಾಜಕೀಯ ಶಕ್ತಿಯನ್ನಾಗಿ ಬದಲಾಯಿಸುವ ಅವಶ್ಯಕತೆ ಇದೆ. ರಾಜ್ಯದುದ್ದಕ್ಕೂ ಈ ಎಲ್ಲ ಸಂಘಟನೆಗಳ ಮುಖಂಡರು ಚುನಾವಣೆಗೆ ಸ್ಪರ್ಧಿಸಲು ಮುಂದಾದರೆ ಅವರೊಂದಿಗೆ ಚರ್ಚಿಸಿ ಪ್ರಜಾರಂಗ ಸಂಯುಕ್ತ ದಳದ ಹೆಸರಿನಲ್ಲಿ ಪ್ರಣಾಳಿಕೆಯನ್ನು ಸಿದ್ಧಪಡಿಸಲಾಗುವುದು ಎಂದು ತಿಳಿಸಿದರು.

ರಾಜ್ಯದಲ್ಲಿ ಹೈದರಾಬಾದ್-ಕರ್ನಾಟಕ, ಉತ್ತರ ಕರ್ನಾಟಕ, ಮಹದಾಯಿ, ಕಳಸಾ ಬಂಡೂರಿ ಸಮಸ್ಯೆ , ಕಾವೇರಿ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ರಾಜಕೀಯ ಶಕ್ತಿ ಪಡೆಯುವ ಮೂಲಕ ಯೋಜನೆಗಳನ್ನು ರೂಪಿಸಲಾಗುವುದು ಎಂದು ವಾಟಾಳ್ ತಿಳಿಸಿದರು.
ಇದೇ ಸಂದರ್ಭದಲ್ಲಿ ಕಳೆದ 58 ವರ್ಷಗಳಿಂದ ನಡೆಸಿರುವ ಹೋರಾಟಗಳ ಕುರಿತಾದ ವೆಬ್‍ಸೈಟ್‍ವೊಂದನ್ನು ವಾಟಾಳ್ ನಾಗರಾಜ್ ಬಿಡುಗಡೆ ಮಾಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ