ಬೆಂಗಳೂರು,ಮಾ.16-ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆಯುವ ದ್ವೈವಾರ್ಷಿಕ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು, ತಮ್ಮ ತಮ್ಮ ಶಾಸಕರು ಅಡ್ಡ ಮತದಾನ ಮಾಡುವುದನ್ನು ತಪ್ಪಿಸಲು ವಿಪ್ ನೀಡಲಿವೆ.
ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಚುನಾವಣಾ ಕಣದಲ್ಲಿ ಐವರು ಅಭ್ಯರ್ಥಿಗಳು ಸ್ಪರ್ಧಿಸಿರುವುದರಿಂದ ಮತದಾನ ಮಾ.23ರಂದು ನಡೆಯಲಿದೆ. ಹೀಗಾಗಿ ಮತದಾನಕ್ಕೂ ಮುನ್ನ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ತಮ್ಮ ತಮ್ಮ ಶಾಸಕರಿಗೆ ವಿಪ್ ನೀಡಲು ಮುಂದಾಗಿವೆ.
ಕಳೆದ ರಾಜ್ಯಸಭೆ ಚುನಾವಣೆ ಸಂದರ್ಭದಲ್ಲಿ ಜೆಡಿಎಸ್ 8 ಮಂದಿ ಶಾಸಕರು ವಿಪ್ ಉಲ್ಲಂಘಿಸಿ ಮತ ಚಲಾವಣೆ ಮಾಡಿದ್ದರಿಂದ ಜೆಡಿಎಸ್ನ ಅಧಿಕೃತ ಅಭ್ಯರ್ಥಿ ಸೋತ್ತಿದ್ದರು.
ವಿಧಾನಸಭೆಯಲ್ಲಿ ರಾಜಕೀಯ ಪಕ್ಷಗಳು ಹೊಂದಿರುವ ಶಾಸಕರ ಸಂಖ್ಯಾಬಲದ ಆಧಾರದ ಮೇಲೆ ಬಿಜೆಪಿ ಒಂದು ಸ್ಥಾನವನ್ನು ಕಾಂಗ್ರೆಸ್ ಎರಡು ಸ್ಥಾನವನ್ನು ಸುಲಭವಾಗಿ ಗೆಲ್ಲಬಹುದಾಗಿದೆ. ಆದರೆ ಕಾಂಗ್ರೆಸ್ನ ಮೂರನೇ ಅಭ್ಯರ್ಥಿ ಹಾಗೂ ಜೆಡಿಎಸ್ ಅಭ್ಯರ್ಥಿಯ ನಡುವೆ ಪೈಪೆÇೀಟಿ ಏರ್ಪಡಲಿದೆ.
ಹೀಗಾಗಿ ಆಯಾ ಪಕ್ಷದ ಅಧಿಕೃತ ಅಭ್ಯರ್ಥಿಗಳಿಗೆ ಮತ ಚಲಾಯಿಸುವಂತೆ ರಾಜಕೀಯ ಪಕ್ಷಗಳು ಶಾಸಕರಿಗೆ ವಿಪ್ ನೀಡಲಿವೆ. ರಾಜಸಭೆಯ ಚುನಾವಣೆಗೆ ಜೆಡಿಎಸ್ನ ಬಿ.ಎಂ.ಫಾರೂಕ್, ಬಿಜೆಪಿಯ ರಾಜೀವ್ ಚಂದ್ರಶೇಖರ್, ಕಾಂಗ್ರೆಸ್ನ ಡಾ.ಎಲ್.ಹನುಮಂತಯ್ಯ, ಡಾ.ಸಯ್ಯದ್ ನಾಸೀರ್ ಹುಸೇನ್ ಹಾಗೂ ಜಿ.ಚಂದ್ರಶೇಖರ್ ಅವರು ಸ್ಪರ್ಧಿಸಿದ್ದಾರೆ.
ರಾಜ್ಯಸಭೆ ಸದಸ್ಯರಾದ ರೆಹಮಾನ್ ಖಾನ್, ಬಸವರಾಜ್ ಪಾಟೀಲ್, ರಂಗಸಾಯಿ ರಾಮಕೃಷ್ಣ ಹಾಗೂ ರಾಜೀವ್ ಚಂದ್ರಶೇಖರ್ ಅವರು ಏ.2ರಂದು ನಿವೃತ್ತಿಯಾಗುತ್ತಿದ್ದು , ನಿವೃತ್ತಿಯಿಂದ ತೆರವಾಗುವ ಸ್ಥಾನಗಳಿಗೆ ಕೇಂದ್ರ ಚುನಾವಣಾ ಆಯೋಗ ಚುನಾವಣೆ ನಡೆಸುತ್ತಿದೆ.