![agarwaal](http://kannada.vartamitra.com/wp-content/uploads/2018/03/agarwaal-381x381.jpg)
ಮೈಸೂರು, ಮಾ.17-ಕರ್ನಾಟಕದಲ್ಲಿ ಕಾಂಗ್ರೆಸ್ ಮುಕ್ತ ರಾಜ್ಯವಾಗಿಸಲು ಬಿಜೆಪಿ ಮುಂದಾಗಿದೆ ಎಂದು ಉತ್ತರ ಪ್ರದೇಶದ ನೀರಟ್ ಲೋಕಸಭಾ ಕ್ಷೇತ್ರದ ಸದಸ್ಯ ರಾಜೇಂದ್ರ ಅಗರ್‍ವಾಲ್ ತಿಳಿಸಿದರು.
ನಗರದ ಖಾಸಗಿ ಹೊಟೇಲೊಂದರಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸೋಲಿಸುವುದೇ ನಮ್ಮ ಗುರಿ. ಕಾಂಗ್ರೆಸ್ ಭ್ರಷ್ಟಾಚಾರದಲ್ಲಿ ತೊಡಗಿದೆ. ಹಾಗಾಗಿ ಅವರನ್ನು ಸೋಲಿಸುವುದೇ ಬಿಜೆಪಿಯ ಮುಖ್ಯ ಉದ್ದೇಶವಾಗಿದೆ ಎಂದರು.
ಸಿಎಂ ಅವರು ಜಾತಿ, ಜನ, ಭಾಷೆಯನ್ನು ಒಡೆದು ಆಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಸೋಲಿಸುವುದೇ ಮುಖ್ಯ ಉದ್ದೇಶವಾಗಿದ್ದು, ಈ ನಿಟ್ಟಿನಲ್ಲಿ ನಮ್ಮೊಂದಿಗೆ ರಾಜ್ಯದ ಜನತೆ ಇದ್ದಾರೆಂದು ಹೇಳಿದರು.
ತಮಗೆ ಮೈಸೂರಿನ 4 ಕ್ಷೇತ್ರಗಳಾದ ಕೃಷ್ಣರಾಜ, ಚಾಮರಾಜ, ನರಸಿಂಹರಾಜ ಹಾಗೂ ಚಾಮುಂಡೇಶ್ವರಿ ಕ್ಷೇತ್ರಗಳ ಉಸ್ತುವಾರಿಯನ್ನು ವಹಿಸಲಾಗಿದೆ. ಈ ನಾಲ್ಕು ಕ್ಷೇತ್ರಗಳ ಪೈಕಿ ಈಗಾಗಲೇ ನಾನು 3 ಕ್ಷೇತ್ರಗಳಲ್ಲಿ ಪ್ರವಾಸ ನಡೆಸಿದ್ದೇನೆ. ಇಂದು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪ್ರವಾಸ ಕೈಗೊಳ್ಳಲಿದ್ದೇನೆ ಎಂದು ಅವರು ಹೇಳಿದರು.
ಸಿದ್ದರಾಮಯ್ಯ ಅವರು ಒಂದೆಡೆ ಭ್ರಷ್ಟಾಚಾರ ನಡೆಸುತ್ತಿದ್ದರೆ, ಮತ್ತೊಂದೆಡೆ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಈ ಹಿನ್ನೆಲೆಯಲ್ಲಿ ಜನತೆ ಬೇಸರಗೊಂಡಿದ್ದು, ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರವನ್ನು ಮುಕ್ತಗೊಳಿಸಲಿದ್ದಾರೆ. ಅದೇ ಅಜೆಂಡಾ ನಮ್ಮದು. ಅಭಿವೃದ್ಧಿಯೇ ನಮ್ಮ ಮಂತ್ರ. ಹಾಗಾಗಿ ನಾವು ರಾಜ್ಯಾದ್ಯಂತ ಜಾತಿ, ಮತ, ಭಾಷೆ, ಭೇದ ಮಾಡದೆ ಅಭಿವೃದ್ಧಿ ಕೈಗೊಳ್ಳುತ್ತೇವೆ ಎಂದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಗೆಲುವೇ ನಮ್ಮ ಮಿಷನ್ ಆಗಿದ್ದು, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸಲು ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು. ಯಾವ ಅಭ್ಯರ್ಥಿಯು ಇವರ ವಿರುದ್ಧ ನಿಲ್ಲುತ್ತಾರೆಂಬುದು ಹೈಕಮಾಂಡ್ ತೀರ್ಮಾನ ಕೈಗೊಳ್ಳಲಿದೆ ಎಂದರು.
ಯಾರೊಂದಿಗೂ ಮೈತ್ರಿಯಿಲ್ಲ, ಬಿಜೆಪಿ ಸ್ವತಂತ್ರವಾಗಿದೆ. ಯಾವುದೇ ಪರಿಸ್ಥಿತಿಯಲ್ಲೂ ಮೈತ್ರಿ ಮಾಡಿಕೊಳ್ಳುವ ಅಗತ್ಯವಿಲ ಎಂದು ಅವರು ಹೇಳಿದರು.
ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಅವರು, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಬಿಜೆಪಿ ಜಯಗಳಿಸುವ ಅಭ್ಯರ್ಥಿಯನ್ನೇ ಕಣಕ್ಕಿಳಿಸುತ್ತೇವೆ. ಯಾರೊಂದಿಗೂ ಮೈತ್ರಿ ಮಾಡಿಕೊಳ್ಳಲ್ಲ. ಒಳಒಪ್ಪಂದವೂ ಇಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ನಗರ ಬಿಜೆಪಿ ಅಧ್ಯಕ್ಷ ಮಂಜುನಾಥ್,ï ಮುಖಂಡರಾದ ರವಿಶಂಕರ್, ಪ್ರಭಾಕರ್ ಸಿಂಧೆ, ದತ್ತಾತ್ರೇಯ ಸಿಂಧೆ ಮತ್ತಿತರರು ಪಾಲ್ಗೊಂಡಿದ್ದರು.