ಇಂಫಾಲ್, ಮಾ.16-ಸಂಶೋಧನೆ ಮತ್ತು ಅಭಿವೃದ್ದಿಯನ್ನು ದೇಶದ ವಿಕಾಸಕ್ಕಾಗಿ ಅನ್ವೇಷಣೆ ಎಂದು ಮರುವಾಖ್ಯಾನ ಮಾಡಲು ಕಾಲ ಪಕ್ವವಾಗಿದೆ ಎಂದು ಬಣ್ಣಿಸಿರುವ ಪ್ರಧಾನಿ ನರೇಂದ್ರ ಮೋದಿ, ಸಮಾಜದ ಪ್ರಯೋಜನಕ್ಕಾಗಿ ಸಂಶೋಧನೆಯನ್ನು ಪ್ರಯೋಗಾಲಯದಿಂದ ಜನಸಾಮಾನ್ಯರಿಗೆ ತಲುಪಿಸುವಂತೆ ವಿಜ್ಞಾನಿಗಳ ಸಮುದಾಯಕ್ಕೆ ಸಲಹೆ ಮಾಡಿದ್ದಾರೆ.
ಈಶಾನ್ಯ ರಾಜ್ಯ ಮಣಿಪುರ ರಾಜಧಾನಿ ಇಂಫಾಲ್ನಲ್ಲಿ 105ನೇ ಭಾರತೀಯ ವಿಜ್ಞಾನ ಕಾಂಗ್ರೆಸ್ ಅಧಿವೇಶನ ಉದ್ಘಾಟಿಸಿ ಮಾತನಾಡಿದ ಪ್ರಧಾನಿ, ಭಾರತವು ಅನ್ವೇಷಣೆ ಹಾಗೂ ವಿಜ್ಞಾನ-ತಂತ್ರಜ್ಞಾನ ಬಳಕೆಯಲ್ಲಿ ದೀರ್ಘಕಾಲದಿಂದಲೂ ಸಮೃದ್ಧ ಇತಿಹಾಸ ಹೊಂದಿದೆ ಎಂದರು.
ಅಭಿವೃದ್ದಿ ಮತ್ತು ಸಂಶೋಧನೆ ಕ್ಷೇತ್ರದಲ್ಲಿ ನಮ್ಮ ದೇಶವು ಮುಂಚೂಣಿಯಲ್ಲಿದೆ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡುವ ಕಾಲ ಇದಾಗಿದೆ. ಈ ನಿಟ್ಟಿನಲ್ಲಿ ಲ್ಯಾಬ್ನಿಂದ ಲ್ಯಾಂಡ್ಗೆ (ಪ್ರಯೋಗಾಲಯದಿಂದ ಜನಸಾಮಾನ್ಯರಿಗೆ) ಸಂಶೋಧನೆಯ ಪ್ರಯೋಜನ ಮತ್ತು ಲಾಭಗಳು ದೊಡ್ಡ ಮಟ್ಟದಲ್ಲಿ ಲಭಿಸಲು ವೈಜ್ಞಾನಿಕ ಸಮುದಾಯ ಶ್ರಮಿಸುವಂತೆ ಮೋದಿ ಕರೆ ನೀಡಿದರು.
ಶಿಕ್ಷಣ, ಆರೋಗ್ಯ ಆರೈಕೆ, ಬ್ಯಾಂಕಿಂಗ್ನಂಥ ಕ್ಷೇತ್ರಗಳಲ್ಲಿ ನಮ್ಮ ನಾಗರಿಕರಿಗೆ ಉತ್ತಮ ಸೇವೆಗಳನ್ನು ಒದಗಿಸಲು ತಂತ್ರಜ್ಞಾನ ಸಹಕಾರಿ ಎಂದು ಪ್ರಧಾನಿ ಬಣ್ಣಿಸಿದರು.