![indian-national-congress](http://kannada.vartamitra.com/wp-content/uploads/2018/02/indian-national-congress-678x381.png)
ಬೆಂಗಳೂರು, ಮಾ.16-ವಿಧಾನಸಭೆ ಚುನಾವಣೆ ಸಂಬಂಧ ಕಾಂಗ್ರೆಸ್ ಪ್ರಕ್ರಿಯೆಗಳು ಬಹುತೇಕ ಅಂತಿಮಗೊಂಡಂತಿದೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಹತ್ತು ಕ್ಷೇತ್ರದ ಶಾಸಕರನ್ನು ಹೊರತುಪಡಿಸಿ ಹಾಲಿ ಇರುವ ಎಲ್ಲರಿಗೂ ಟಿಕೆಟ್ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.
ಕೊಳ್ಳೇಗಾಲ, ಬಾದಾಮಿ, ಗುಲ್ಬರ್ಗಾ ಗ್ರಾಮಾಂತರ, ಬೇಲೂರು ಸೇರಿದಂತೆ 10 ಕ್ಷೇತ್ರಗಳಲ್ಲಿ ಹಾಲಿ ಶಾಸಕರು ಅನಾರೋಗ್ಯದ ಕಾರಣ ಅವರ ಮನೆಯವರಿಗೆ ಅಥವಾ ಅವರು ಹೇಳಿದವರಿಗೆ ಟಿಕೆಟ್ ನೀಡುವ ಸಾಧ್ಯತೆ ಇದೆ. ಇನ್ನುಳಿದಂತೆ ಬಹುತೇಕ ಹಾಲಿ ಇರುವವರಿಗೆ ಟಿಕೆಟ್ ದೊರೆಯಲಿದೆ.
ಇದಲ್ಲದೆ, ಬೇರೆ ಪಕ್ಷಗಳಿಂದ ಬಂದವರಿಗೂ ಟಿಕೆಟ್ ನೀಡಲು ನಿರ್ಧರಿಸಲಾಗಿದೆ. ಜೆಡಿಎಸ್‍ನಿಂದ ಬರುವ ಏಳು ಜನ ಶಾಸಕರಿಗೆ ಹಾಗೂ ಬಿಜೆಪಿಯಿಂದ ಬಂದ ಇಬ್ಬರು ಶಾಸಕರಿಗೂ ಟಿಕೆಟ್ ದೊರೆಯಲಿದೆ.
ಹಾಲಿ ಇರುವ 122 ಕ್ಷೇತ್ರಗಳಲ್ಲಿ 10 ಕ್ಷೇತ್ರಗಳನ್ನು ಹೊರತುಪಡಿಸಿದರೆ 112 ಮತ್ತು ಜೆಡಿಎಸ್‍ನ ಬಂಡಾಯ 7, ಬೇರೆ ಪಕ್ಷದಿಂದ ಬಂದ ಇಬ್ಬರು ಸೇರಿದಂತೆ 119 ಅಭ್ಯರ್ಥಿಗಳ ಟಿಕೆಟ್ ಬಹುತೇಕ ಖಚಿತವಾಗಿದೆ.
ಉಳಿದ ಅಭ್ಯರ್ಥಿಗಳ ಆಯ್ಕೆ ಸಂಬಂಧ ವೀಕ್ಷಕರು ವರದಿ ನೀಡಿದ್ದು, ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ತಯಾರಿಸಲಾಗಿದ್ದು, ಗೆಲುವಿನ ಸಾಧ್ಯಸಾಧ್ಯತೆಯ ಮಾನದಂಡವನ್ನು ಮುಂದಿಟ್ಟುಕೊಂಡು ಅಭ್ಯರ್ಥಿಗಳ ಆಯ್ಕೆ ಮಾಡಲು ನಿರ್ಧರಿಸಲಾಗಿದೆ.
ಕಳೆದ ಬಾರಿ ಕಡಿಮೆ ಅಂತರದಲ್ಲಿ ಸೋತ ಅಭ್ಯರ್ಥಿಗಳು ಅಂದರೆ 500 ರಿಂದ 2 ಸಾವಿರ ಮತಗಳ ಅಂತರದಿಂದ ಸೋತು ಕ್ಷೇತ್ರದಲ್ಲಿ ಸಕ್ರಿಯವಾಗಿರುವವರಿಗೆ ಟಿಕೆಟ್ ನೀಡಲು ಪಕ್ಷದಲ್ಲಿ ಗಂಭೀರ ಚರ್ಚೆ ನಡೆದಿದೆ. ರಾಜ್ಯಸಭೆ ಚುನಾವಣೆಯ ನಂತರ ಮೊದಲ ಹಂತದ ಪಟ್ಟಿಯನ್ನು ಕಾಂಗ್ರೆಸ್ ಬಿಡುಗಡೆ ಮಾಡುವ ಸಾಧ್ಯತೆ ಇದ್ದು, ಹಾಲಿ ಇರುವ ಬಹುತೇಕ ಎಲ್ಲಾ ಶಾಸಕರಿಗೆ ಟಿಕೆಟ್ ನೀಡಲು ನಿರ್ಧರಿಸಲಾಗಿದೆ.