ಹಾಸನ, ಮಾ.16- ನೈಸ್ ಸಂಸ್ಥೆಯ ಯೋಜನೆಯಿಂದ ತೊಂದರೆಗೀಡಾಗಿರುವ ರೈತರನ್ನು ಒಗ್ಗೂಡಿಸಿ ರಾಜಭವನ್ ಚಲೋ ನಡೆಸುವುದಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೈಸ್ ಸಂಸ್ಥೆ ವಿರುದ್ಧ ಶೀಘ್ರದಲ್ಲೇ ರಾಜಭವನ್ ಚಲೋ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಹೇಳಿದರು.
ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರೆಸಿದ ಗೌಡರು, ನೈಸ್ ಸಂಸ್ಥೆ ಅಕ್ರಮ ನಡೆಸಿದ್ದು, ಸುಮಾರು 30ಸಾವಿರ ಕೋಟಿ ರೂ.ನಷ್ಟು ವಂಚನೆ ಮಾಡಿದೆ. ಅಂತಹ ಸಂಸ್ಥೆಯ ಮುಖ್ಯಸ್ಥರನ್ನು ಪಕ್ಷಕ್ಕೆ ಸೇರಿಸಿಕೊಂಡು ನಮ್ಮದು ಭ್ರಷ್ಟಾಚಾರ ಮುಕ್ತ ಸರ್ಕಾರವೆಂದರೆ ಜನರು ಒಪ್ಪುತ್ತಾರೆಯೇ ಎಂದು ಪ್ರಶ್ನಿಸಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಯಾವ ಬ್ರೇಕಿಂಗ್ ನ್ಯೂಸ್ ಕೊಡುತ್ತಾರೋ ಕಾದು ನೋಡೋಣ, ನನಗೆ ತಾಳ್ಮೆ ಇದೆ ಎಂದು ಮಾರ್ಮಿಕವಾಗಿ ನುಡಿದರು.
ಚುನಾವಣಾ ಹೊಸ್ತಿಲಿನಲ್ಲಿ ಸಾವಿರಾರು ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಅಡಿಗಲ್ಲು ಹಾಕಿದರೆ ಜನ ನಂಬುತ್ತಾರೆಯೇ? ಜನರು ಪ್ರಬುದ್ಧರಾಗಿದಾರೆ ಎಂದರು.
ಕಾವೇರಿ ಕೊಳ್ಳದ ಸಂಸದರ ಸಭೆಯನ್ನು ಸರ್ಕಾರ ಕರೆದರೆ ಆ ಸಭೆಯಲ್ಲಿ ಪಾಲ್ಗೊಳ್ಳುವುದಾಗಿ ಹೇಳಿದ ಗೌಡರು, ಕಾವೇರಿ ನದಿ ನೀರು ನಿರ್ವಹಣಾ ಮಂಡಳಿ ರಚನೆಗೆ ಸಂಬಂಧಿಸಿದಂತೆ ಈಗಾಗಲೇ ಕೇಂದ್ರ ಸರ್ಕಾರಕ್ಕೆ ಹಲವು ಬಾರಿ ಪತ್ರ ಬರೆದಿರುವುದಾಗಿ ಇದೇ ವೇಳೆ ತಿಳಿಸಿದರು. ಕಾಂಗ್ರೆಸ್ ಪಕ್ಷದ ಭ್ರಷ್ಟಾಚಾರದ ಬಗ್ಗೆ ಮಾಜಿ ಮುಖ್ಯಮಂತ್ರಿ ವೀರಪ್ಪಮೊಯ್ಲಿಗಿಂತ ಬೇರೆ ಹೇಳಬೇಕೇ ಎಂದು ವ್ಯಂಗ್ಯವಾಡಿದರು.
ಮೊಯ್ಲಿ ಪರ್ಸೆಂಟ್ ರಾಜಕೀಯ ಆರೋಪದಲ್ಲಿ ಯಾವುದೇ ಅನುಮಾನವಿಲ್ಲ, ಇದು ಒಂದು ಅಂಶವಷ್ಟೆ. ಈ ರೀತಿಯ ಚಟುವಟಿಕೆಗಳು ಸರ್ಕಾರದಲ್ಲಿ ಸಾಕಷ್ಟು ನಡೆಯುತ್ತಿವೆ ಎಂದು ಟೀಕಾ ಪ್ರಹಾರ ನಡೆಸಿದರು. ನೋಟ್ಬ್ಯಾನ್, ಜಿಎಸ್ಟಿ ಜಾರಿ ಹಾಗೂ ಕಪ್ಪು ಹಣವನ್ನು ಬಡವರಿಗೆ ಹಂಚುವ ಕೇಂದ್ರ ಸರ್ಕಾರ ಭರವಸೆಯ ನಂತರ ನಡೆದ ರಾಜಕೀಯ ಬೆಳವಣಿಗೆಗಳು ಪ್ರಧಾನಿ ಮೋದಿ ಅವರ ಜನಪ್ರಿಯತೆಯನ್ನು ಕುಗ್ಗಿಸುತ್ತಿದೆ ಎಂದರು.
ಎನ್ಡಿಎ ಮೈತ್ರಿ ಕೂಟದಿಂದ ಟಿಡಿಪಿ ಹೊರ ಬಂದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಗೌಡರು, ಆಂಧ್ರಪ್ರದೇಶ ವಿಭಜನೆಯಾದಾಗ ವಿಶೇಷ ಪ್ಯಾಕೇಜ್ ನೀಡುವುದಾಗಿ ಕೇಂದ್ರ ಸರ್ಕಾರ ನೀಡಿದ್ದ ಭರವಸೆ ಇದುವರೆಗೂ ಈಡೇರಿಲ್ಲ. ಪ್ಯಾಕೇಜ್ಗೆ ಸಂಬಂಧಿಸಿದಂತೆ ಪ್ರಧಾನಿ ಯೂಟರ್ನ್ ತೆಗೆದುಕೊಂಡ ಹಿನ್ನೆಲೆಯಲ್ಲಿ ಇಂತಹ ಹೊಸ ಬೆಳವಣಿಗೆ ನಡೆದಿರಬಹುದು ಎಂದರು.