ನವದೆಹಲಿ, ಮಾ.16- ಸಂಸದ ವೀರಪ್ಪಮೊಯ್ಲಿ ಅವರ ಟ್ವಿಟ್ ಹಿಂದೆ ಬಿಜೆಪಿಯವರ ಕೈವಾಡವಿದೆ ಎಂದು ಗಂಭೀರ ಆರೋಪ ಮಾಡಿರುವ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರು ಈ ಬಗ್ಗೆ ಸೈಬರ್ ಕ್ರೈಂಗೆ ದೂರು ನೀಡುವ ಬಗ್ಗೆ ಚರ್ಚಿಸಲಾಗಿದೆ ಎಂದು ಹೇಳಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೀರಪ್ಪಮೊಯ್ಲಿ ಅವರ ಟ್ವಿಟ್ ಹ್ಯಾಕ್ ಆಗಿದೆ ಎಂದು ಹೇಳಲಾಗಿದೆ. ಈ ಹ್ಯಾಕ್ ಹಿಂದೆ ಬಿಜೆಪಿ ಕೈವಾಡ ಇರುವ ಶಂಕೆ ಇದೆ. ಈ ಬಗ್ಗೆ ದೂರು ನೀಡಲು ಚಿಂತನೆ ನಡೆಸಲಾಗಿದೆ. ಟ್ವಿಟ್ ಬಗ್ಗೆ ಬಿಜೆಪಿಯವರ ನಿರಂತರ ಪ್ರತಿಕ್ರಿಯೆ ನೋಡಿದರೆ ಇದರ ಹಿಂದೆ ಅವರ ಸಂಚು ಇದ್ದಂತೆ ಕಾಣುತ್ತಿದೆ ಎಂದು ಹೇಳಿದ್ದಾರೆ.
ಟ್ವಿಟ್ ಬಗ್ಗೆ ವೀರಪ್ಪಮೊಯ್ಲಿ ಅವರು ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ನಾನು ಆ ಟ್ವಿಟ್ ಮಾಡಿಲ್ಲ. ಯಾರೋ ಹ್ಯಾಕ್ ಮಾಡಿದ್ದಾರೆ ಎಂದು ಹೇಳಿದ್ದಾರೆ. ಆದರೆ, ಬಿಜೆಪಿಯವರು ಸಾಕಷ್ಟು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಇದರ ಹಿಂದೆ ಬಿಜೆಪಿಯವರ ಕೈವಾಡವಿರುವ ಸಾಧ್ಯತೆ ಇದೆ ಎಂದು ಪರಮೇಶ್ವರ್ ಗರಂ ಆಗಿ ಹೇಳಿದ್ದಾರೆ.
ಅಭ್ಯರ್ಥಿಗಳ ಆಯ್ಕೆಗೆ ಕಾಂಗ್ರೆಸ್ ಚುನಾವಣಾ ಸಮಿತಿಯು ಸಭೆ ನಡೆಸಿ ಹಲವು ವಿಭಾಗಗಳ ಮೂಲಕ ಆಯ್ಕೆ ಮಾಡಲಿದೆ. ಅಂತಿಮವಾಗಿ ಅಭ್ಯರ್ಥಿಗಳನ್ನು ಹೈಕಮಾಂಡ್ ನಿರ್ಧರಿಸಲಿದೆ ಎಂದು ತಿಳಿಸಿದರು.