ಬೆಂಗಳೂರು, ಮಾ.16-ಅಕ್ರಮ ಜಾಹೀರಾತು ಫಲಕ ಮತ್ತು ಭಿತ್ತಿಪತ್ರ ತೆರವು ಕಾರ್ಯಾಚರಣೆಯನ್ನು ಬಿಬಿಎಂಪಿ ಇಂದಿನಿಂದ ಆರಂಭಿಸಿದೆ.
ಮೇಯರ್ ಸಂಪತ್ರಾಜ್, ಉಪಮೇಯರ್ ಪದ್ಮಾವತಿ ನರಸಿಂಹಮೂರ್ತಿ, ಆಡಳಿತ ಪಕ್ಷದ ನಾಯಕ ಎಂ.ಶಿವರಾಜ್, ಪ್ರತಿಪಕ್ಷದ ನಾಯಕಿ ಶ್ವೇತಾನಾರಾಯಣ್ ಮತ್ತಿತರರು ಪೂರ್ವವಲಯದಲ್ಲಿಂದು ಜಾಹೀರಾತು ಫಲಕ ತೆರವು ಕಾರ್ಯಾಚರಣೆಯಲ್ಲಿ ಪಾಲ್ಗೊಂಡರು.
ಸ್ವತಃ ಮೇಯರ್, ಉಪಮೇಯರ್, ಆಡಳಿತ ಪಕ್ಷದ ನಾಯಕರೇ ಎಲ್ಲೆಲ್ಲಿ ಭಿತ್ತಿಪತ್ರ ಅಂಟಿಸುತ್ತೋ ಅವುಗಳನ್ನು ಕೈಗಳಿಂದಲೇ ತೆರವುಗೊಳಿಸಿದರು.
ವಿವಿಪುರಂ, ಎ.ಎನ್.ಕೆ ರಸ್ತೆಯಲ್ಲಿ ಬೃಹತ್ತಾದ ಜಾಹೀರಾತು ಫಲಕ ಹಾಕಿದ್ದುದು ಕಂಡು ಬಂತು. ತಕ್ಷಣ ಅಲ್ಲಿಗೆ ಜೆಸಿಬಿ ತರಿಸಿದ ಮೇಯರ್ ಅವರು, ಜಾಬ್ ಕಟರ್ ಮೂಲಕ ಈ ಫಲಕವನ್ನು ತೆರವುಗೊಳಿಸಿದರು.
ಈ ಭಾಗದಲ್ಲಿ ಮರಗಳಿಗೆ ಮೊಳೆ ಹೊಡೆದು ಜಾಹೀರಾತು ಅಂಟಿಸಿದ್ದುದು ಕಂಡು ಬಂದಿತು. ಅಲ್ಲದೆ, ತಡೆಗೋಡೆಗಳು, ಕಾಂಪೌಂಡ್ಗಳು, ಅಂಗಡಿಗಳ ಮುಂಭಾಗದಲ್ಲೂ ಈ ರೀತಿ ಜಾಹೀರಾತುಗಳನ್ನು ಅಂಟಿಸಿರುವುದು ಕಂಡು ಮೇಯರ್ ಗರಂ ಆದರು.
ಅಲ್ಲಿದ್ದ ಅಧಿಕಾರಿಗಳಿಗೆ ಏನ್ರೀ… ನಿಮಗೆ ಇವೆಲ್ಲ ಕಣ್ಣಿಗೆ ಕಾಣುವುದಿಲ್ಲವೇ? ಎಲ್ಲೆಂದರಲ್ಲಿ ಜಾಹೀರಾತು ಕಾಣುತ್ತಿದೆ. ಇದನ್ನು ತೆರವುಗೊಳಿಸಬೇಕು ಎಂದು ಅನ್ನಿಸಲಿಲ್ಲವೇ? ಇವುಗಳಿಂದ ನಗರದ ಸೌಂದರ್ಯ ಹಾಳಾಗುತ್ತಿದೆ. ಜೊತೆಗೆ ಪಾಲಿಕೆಗೆ ಕೋಟ್ಯಂತರ ರೂ. ನಷ್ಟವಾಗುತ್ತಿದೆ ಎಂದು ತರಾಟೆಗೆ ತೆಗೆದುಕೊಂಡರು.
ಇನ್ನು ಮುಂದೆ ಈ ರೀತಿ ಅನಧಿಕೃತವಾಗಿ ಎಲ್ಲೆಂದರಲ್ಲಿ ಜಾಹೀರಾತು, ಭಿತ್ತಿಪತ್ರ ಅಂಟಿಸಿದರೆ ಅಂಥವರ ವಿರುದ್ಧ ಕೇಸು ದಾಖಲಿಸಿ, ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಮೇಯರ್ ಸಂಪತ್ರಾಜ್ ಎಚ್ಚರಿಸಿದರು.
ಎಎನ್ಕೆ ರಸ್ತೆ ಸೇರಿದಂತೆ ವಿವಿಧ ಭಾಗಗಳಲ್ಲಿ ಮೇಯರ್ ನೇತೃತ್ವದ ತಂಡ ಸಂಚರಿಸಿ ಜಾಹೀರಾತು ಫಲಕಗಳನ್ನು ತೆರವುಗೊಳಿಸಿದವು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಮೇಯರ್ ಸಂಪತ್ರಾಜ್, ಅನಧಿಕೃತ ಜಾಹೀರಾತು ತೆರವು ಕುರಿತು ಕೌನ್ಸಿಲ್ ಸಭೆಯಲ್ಲೇ ಪ್ರಸ್ತಾಪವಾಗಿತ್ತು. ಪಕ್ಷಾತೀತವಾಗಿ ಬ್ಯಾನರ್, ಫ್ಲೆಕ್ಸ್ ತೆರವು ಮಾಡುವಂತೆ ಸದಸ್ಯರು ಒತ್ತಾಯಿಸಿದ್ದರು. ಜೊತೆಗೆ ಅಕ್ರಮ ಜಾಹೀರಾತು ಫಲಕಗಳ ಸಂಬಂಧ ಸಾಕಷ್ಟು ದೂರುಗಳು ಬಂದಿವೆ. ಹಾಗಾಗಿ ಇಂದಿನಿಂದ ತೆರವು ಕಾರ್ಯಾಚರಣೆ ಪ್ರಾರಂಭಿಸಿದ್ದೇವೆ ಎಂದು ತಿಳಿಸಿದರು.
ಅನುಮತಿ ಪಡೆದಿರುವುದಕ್ಕಿಂತ ಹೆಚ್ಚು ಅಗಲವಾದ ಬ್ಯಾನರ್ ಹಾಕಿದ್ದರೆ ಅದು ಅಕ್ರಮವಾಗುತ್ತದೆ. ರಾತ್ರಿ ಯಾವಾಗಲೋ ಬ್ಯಾನರ್ ಅಳವಡಿಸಿ ಹೋಗಿ ಬಿಡುತ್ತಾರೆ. ಆದರೂ ಅಧಿಕಾರಿಗಳ ಬೇಜವಾಬ್ದಾರಿ ಎದ್ದು ಕಾಣುತ್ತಿದೆ. ಈ ಬಗ್ಗೆ ಕ್ರಮಕೈಗೊಳ್ಳುತ್ತೇವೆ ಎಂದು ಹೇಳಿದರು.
ಬಟ್ಟೆ ಫ್ಲೆಕ್ಸ್ ಅನುಮತಿ ಪಡೆದು ಹಾಕಬಹುದು. ಚುನಾವಣೆ ಸಂದರ್ಭದಲ್ಲಿ ಅನುಮತಿ ಪಡೆದು ರಾಜಕೀಯ ಪಕ್ಷಗಳು ಬ್ಯಾನರ್ ಹಾಕಿಕೊಳ್ಳಲಿ. ಆದರೆ ಯಾರೇ ಅನಧಿಕೃತವಾಗಿ ಜಾಹೀರಾತು ಹಾಕಿದರೂ ಅಂಥವರ ವಿರುದ್ಧ ಕ್ರಮಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ಅಸಮಾಧಾನ: ಈ ವೇಳೆ ಸಾಮಾಜಿಕ ಕಾರ್ಯಕರ್ತ ಸಾಯಿ ದತ್ತ ಮಾತನಾಡಿ, ನಗರದಲ್ಲಿ ಎಷ್ಟು ಅನಧಿಕೃತ ಬ್ಯಾನರ್ಗಳಿವೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿಯೇ ಬಿಬಿಎಂಪಿಗೆ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹೈಕೋರ್ಟ್ ತರಾಟೆಗೆ ತೆಗೆದುಕೊಂಡ ನಂತರ ಮಹಾಪೌರರು ಅನಧಿಕೃತ ಜಾಹೀರಾತು ಫಲಕ ತೆರವಿಗೆ ಮುಂದಾಗಿದ್ದಾರೆ. ಕೇವಲ ಜನರ ಕಣ್ಣೊರೆಸುವ ತಂತ್ರ ಮಾಡಬಾರದು. ಅನಧಿಕೃತ ಜಾಹೀರಾತಿನ ದೊಡ್ಡ ಮಾಫಿಯಾವೇ ಇದೆ. ರಾಜಕಾರಣಿಗಳ ಕುಮ್ಮಕ್ಕು ಇರುವುದರಿಂದಲೇ ಬಂಟಿಂಗ್ಸ್, ಬ್ಯಾನರ್ಸ್ ತೆರವು ಸಾಧ್ಯವಾಗುತ್ತಿಲ್ಲ ಎಂದು ದೂರಿದರು.