ಸಂಸದ ವೀರಪ್ಪಮೊಯ್ಲಿ ಅವರು ಟ್ವಿಟ್ಟರ್‍ನಲ್ಲಿ ಮಾಡಿರುವ ಆರೋಪಕ್ಕೂ ನನಗೂ ಸಂಬಂಧವಿಲ್ಲ – ಸಚಿವ ಎಚ್.ಸಿ.ಮಹದೇವಪ್ಪ

ಬೆಂಗಳೂರು, ಮಾ.16- ಸಂಸದ ವೀರಪ್ಪಮೊಯ್ಲಿ ಅವರು ಟ್ವಿಟ್ಟರ್‍ನಲ್ಲಿ ಮಾಡಿರುವ ಆರೋಪಕ್ಕೂ ನನಗೂ ಸಂಬಂಧವಿಲ್ಲ. ಈಗಾಗಲೇ ಅವರೇ ಸ್ಪಷ್ಟನೆ ನೀಡಿರುವುದರಿಂದ ಇದು ಮುಗಿದ ಅಧ್ಯಾಯ ಎಂದು ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟ್ವಿಟರ್‍ನಲ್ಲಿ ವೀರಪ್ಪಮೊಯ್ಲಿ ಅವರು ಏನು ಆರೋಪ ಮಾಡಿದ್ದಾರೆಂಬುದು ನನಗೆ ತಿಳಿದಿಲ್ಲ. ನನ್ನ ಟ್ವಿಟ್ಟರ್‍ಅನ್ನು ಹ್ಯಾಕ್ ಮಾಡಲಾಗಿದೆ ಎಂದು ಸ್ವತಃ ಅವರೇ ಹೇಳಿರುವುದರಿಂದ ವಿವಾದವನ್ನು ಮುಂದುವರಿಸುವುದರಲ್ಲಿ ಅರ್ಥವಿಲ್ಲ. ಅಷ್ಟಕ್ಕೂ ನನಗೆ ಟ್ವಿಟ್ಟರ್ ನೋಡಲು ಬರುವುದಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದಲ್ಲಿ ವೀರಪ್ಪಮೊಯ್ಲಿ ಅತ್ಯಂತ ಹಿರಿಯ ನಾಯಕರು. ವಿನಾಕಾರಣ ಆಧಾರ ರಹಿತವಾಗಿ ಆರೋಪ ಮಾಡಲು ಅವರೇನು ಸಣ್ಣ ಮಗುವಲ್ಲ. ಏನು ಮಾತನಾಡಬೇಕು ಎಂಬುದು ಅವರಿಗೆ ತಿಳಿದಿದೆ. ಆದರೆ, ಟ್ವಿಟ್ಟರ್‍ನಲ್ಲಿ ಮಾಡಿರುವ ಆರೋಪಕ್ಕೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಪುನರುಚ್ಚರಿಸಿದರು.
ಯಾರಿಗೆ, ಯಾವ ಕ್ಷೇತ್ರದಲ್ಲಿ ಟಿಕೆಟ್ ನೀಡಬೇಕು ಎಂಬುದನ್ನು ಹೈಕಮಾಂಡ್ ನಿರ್ಧರಿಸುತ್ತದೆ. ಸ್ಕ್ರೀನಿಂಗ್ ಕಮಿಟಿ, ಚುನಾವಣಾ ಸಮಿತಿ ಹಾಗೂ ಹೈಕಮಾಂಡ್ ತೀರ್ಮಾನವೇ ಅಂತಿಮವಾಗಿರುವುದರಿಂದ ಟಿಕೆಟ್ ಹಂಚಿಕೆಯಲ್ಲಿ ಯಾರಿಗೂ ಯಾವುದೇ ರೀತಿಯ ಅಸಮಾಧಾನದ ಪ್ರಶ್ನೆ ಉದ್ಭವಿಸುವುದಿಲ್ಲ ಎಂದರು.
ಟಿಕೆಟ್ ಹಂಚಿಕೆ ಸಂಬಂಧ ಪಕ್ಷದ ನಾಯಕರು ಒಂದೇ ವೇದಿಕೆಯಲ್ಲಿ ಕುಳಿತು ಚರ್ಚಿಸಿದ್ದಾರೆ. ಸೂಕ್ತ ಕಾಲದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಂಡು ಟಿಕೆಟ್ ನೀಡುವುದರಿಂದ ಸಮಸ್ಯೆ ಉಂಟಾಗುವ ಪ್ರಮೇಯವೇ ಬರುವುದಿಲ್ಲ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ