ಬೆಂಗಳೂರು,ಮಾ.16- ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಎಂದೇ ಬಿಂಬಿತವಾಗಿರುವ ಬಿ.ಎಸ್.ಯಡಿಯೂರಪ್ಪ , ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರದ ವಿರುದ್ಧ ನಡೆಸುತ್ತಿರುವ ಟೀಕಾ ಪ್ರಹಾರ ತೀವ್ರ ಗೊಳಿಸಿರುವುದಲ್ಲದೆ ಟ್ವಿಟರ್ನಲ್ಲೂ ಬ್ರೇಕಿಂಗ್ ನ್ಯೂಸ್ ಹಾಕಲಿದ್ದಾರಂತೆ.
ಇಂದು ಸಂಜೆ 5 ಗಂಟೆಗೆ ಬ್ರೇಕಿಂಗ್ ನ್ಯೂಸ್ ಎಂದು ಬರೆದಿರುವ ಗ್ರಾಫಿಕ್ಸ್ ಕಾರ್ಡನ್ನು ಯಡಿಯೂರಪ್ಪ ನಿನ್ನೆ ಸಂಜೆಯೇ ಟ್ವೀಟ್ ಮಾಡಿದ್ದಾರೆ. ಆದರೆ, ಯಾವ ಬ್ರೇಕಿಂಗ್ ನ್ಯೂಸ್ ಎಂಬ ಗುಟ್ಟು ಬಿಟ್ಟುಕೊಟ್ಟಿಲ್ಲ. ಬಿಜೆಪಿಯ ಮೂಲಗಳ ಪ್ರಕಾರ ಬಿಎಸ್ವೈ ರಾಜ್ಯ ರಾಜಕಾರಣದಲ್ಲಿ ಹೊಸ ಬಾಂಬ್ ಸಿಡಿಸುವ ಸಾಧ್ಯತೆ ಇದೆ. ಕಾಂಗ್ರೆಸ್ ಸರಕಾರದ ಸಚಿವರೊಬ್ಬರ ಹಗರಣ ಬಯಲಿಗೆಳಯಬಹುದು, ಅಥವಾ ಬಿಜೆಪಿ ಸ್ಪರ್ಧಾಕಾಂಕ್ಷಿಗಳ ಹೆಸರು ಬಿಡುಗಡೆ ಮಾಡಬಹುದು, ಅಥವಾ ಆಪರೇಷನ್ ಕಮಲದ ಸೂಚನೆ ನೀಡಬಹುದು ಎಂದು ಅಂದಾಜಿಸಲಾಗಿದೆ. ಆದರೆ, ಬಿಎಸ್ವೈ ಅವರ ಈ ಟ್ವೀಟ್ ಬಿಜೆಪಿ ವಲಯದಲ್ಲಷ್ಟೇ ಅಲ್ಲ ರಾಜಕೀಯ ವಲಯದಲ್ಲೂ ತೀವ್ರ ಕುತೂಹಲ ಮೂಡಿಸಿದೆ.