ಕೋಲಾರ, ಮಾ.16- ಜನನಿಬಿಡ ಪ್ರದೇಶದಲ್ಲಿ ನಡೆದಿದ್ದ ದರೋಡೆ ಜಾಲವನ್ನು ನಗರ ಠಾಣೆ ಪೆÇಲೀಸರು ಪತ್ತೆಹಚ್ಚಿ ಉತ್ತರ ಪ್ರದೇಶ ಮೂಲದ ವ್ಯಕ್ತಿಯನ್ನು ಬಂಧಿಸಿ 80 ಸಾವಿರ ಹಣವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ನಗರದ ಡೂಮ್ಲೈಟ್ ವೃತ್ತದ ಸಮೀಪ ಜ.29ರಂದು ಸಂಜೆ ಪ್ರಭಾಕರ ಎಂಬುವರ ಮನೆಗೆ ನುಗ್ಗಿದ ಐದು ಮಂದಿ ದರೋಡೆಕೋರರು ಮನೆಯಲ್ಲಿದ್ದ ಮೂವರು ಮಹಿಳೆಯರಿಗೆ ಪಿಸ್ತೂಲು ತೋರಿಸಿ ಬೆದರಿಸಿ ಅವರನ್ನು ಕಟ್ಟಿಹಾಕಿ ಅವರ ಮೈ ಮೇಲಿದ್ದ ಒಡವೆಗಳನ್ನು ಕಸಿದುಕೊಂಡಿದ್ದರು.
ಇದೇ ವೇಳೆಗೆ ಪ್ರಭಾಕರ್ ಅವರು ಮನೆಗೆ ಬಂದಾಗ ಅವರ ಮೇಲೂ ಹಲ್ಲೆ ನಡೆಸಿ ಬೀರು ತೆಗೆಸಿ 6 ಲಕ್ಷ ರೂ. ಹಣ ಹಾಗೂ 20 ಲಕ್ಷ ಮೌಲ್ಯದ ಆಭರಣದೊಂದಿಗೆ ಪರಾರಿಯಾಗಿದ್ದರು.
ಈ ಸಂಬಂಧ ನಗರ ಠಾಣೆ ಪೆÇಲೀಸರು ದರೋಡೆ ಪ್ರಕರಣ ದಾಖಲಿಸಿಕೊಂಡಿದ್ದರು. ಸರ್ಕಲ್ ಇನ್ಸ್ಪೆಕ್ಟರ್ ಲೋಕೇಶ್ ಮತ್ತು ಸಬ್ಇನ್ಸ್ಪೆಕ್ಟರ್ ಪುರುಷೋತ್ತಮ್, ಸಿಬ್ಬಂದಿಗಳಾದ ಅಮೀದ್ಖಾನ್, ರಾಘವೇಂದ್ರ, ನರೇಂದ್ರ, ವೆಂಕಟರಮಣ, ಆಶಿಶ್, ಆಂಜನಪ್ಪ ಅವರನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿ ಉತ್ತರ ಪ್ರದೇಶ ಮೂಲದ ಮತೀನ್ ಅಹಮ್ಮದ್(24) ಎಂಬಾತನನ್ನು ಬಂಧಿಸಿದ್ದು, ಉಳಿದವರಿಗಾಗಿ ಶೋಧ ಕೈಗೊಂಡಿದೆ.
ಈತ ಬೆಂಗಳೂರಿನ ಚನ್ನಸಂದ್ರ ರಸ್ತೆಯ ಕಲ್ಕೆರೆ ಗ್ರಾಮದ ಅಯ್ಯಪ್ಪ ಭೇಕರಿ ಹಿಂಭಾಗದಲ್ಲಿ ಗ್ಲಾಸ್ ಡಿಸೈನ್ ವೃತ್ತಿ ಮಾಡಿಕೊಂಡು ವಾಸವಾಗಿದ್ದನು.