![H Vishwanath](http://kannada.vartamitra.com/wp-content/uploads/2018/03/H-Vishwanath-678x380.jpeg)
ಮೈಸೂರು,ಮಾ.16-ಸಚಿವ ಎಚ್.ಸಿ.ಮಹದೇವಪ್ಪ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಖಜಾನೆ ಎಂದು ಮಾಜಿ ಸಂಸದ ಎಚ್.ವಿಶ್ವನಾಥ್ ಆರೋಪಿಸಿದ್ದಾರೆ.
ನಗರದಲ್ಲಿಂದು ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ಕಾಂಗ್ರೆಸ್ ಟಿಕೆಟ್ ಮಾರಾಟ ಮಾಡಿ ಖಜಾನೆ ತುಂಬಿಸಿಕೊಳ್ಳುವ ಕೆಲಸ ಮಾಡುತ್ತಿದೆ ಎಂದು ದೂರಿದರು.
ವೀರಪ್ಪ ಮೊಯ್ಲಿ ಅವರ ಟ್ವೀಟ್ ನೋಡಿ ನನಗೆ ಬಹಳ ಸಂತೋಷವಾಗಿದೆ. ಅವರು ನಿಜ ಹೇಳಿದ್ದಾರೆ. ಎಲ್ಲರೂ ಅವರನ್ನು ಸುಳ್ಳು ಹೇಳುತ್ತಾರೆ ಎಂದು ಹೇಳುತ್ತಾರೆ. ಆದರೆ ಮೊಯ್ಲಿ ಸತ್ಯವನ್ನು ನುಡಿದಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್‍ನವರು ಎಲ್ಲವನ್ನೂ ಮಾರಾಟ ಮಾಡಿದಾಯ್ತು. ಈಗ ಟಿಕೆಟ್ ಮಾರಾಟ ಮಾಡಲು ಮುಂದಾಗಿದ್ದಾರೆ. ಇದು ರಾಜ್ಯದ ದುರ್ದೈವದ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪಕ್ಷದಲ್ಲಿನ ಭ್ರಷ್ಟಾಚಾರದ ಬಗ್ಗೆ ನಾನು ಧ್ವನಿ ಎತ್ತಿದ ಬಳಿಕ ಜ್ಞಾನೋದಯವಾಗಿದೆ. ಇನ್ನು ಹಲವರಿಗೆ ಅವರ ಟೆಂಟ್ ಪೂರ್ತಿ ಕಿತ್ತು ಹೋದ ನಂತರ ಅರಿವಿಗೆ ಬರುತ್ತದೆ ಎಂದು ವ್ಯಂಗ್ಯವಾಡಿದರು.
ಎಲ್ಲರಿಗೂ ಈ ವಿಚಾರ ಗೊತ್ತೇ ಇದೆ. ಆದರೆ ಅಧಿಕಾರದ ಕಪಿಮುಷ್ಠಿಯಿಂದ ಕೆಲವರನ್ನು ಕಟ್ಟಿ ಹಾಕಲಾಗಿದೆ . ಕಾಂಗ್ರೆಸ್‍ನಲ್ಲಿರುವ ಇನ್ನು ಕೆಲವರು ತಮ್ಮ ಬೇಳೆ ಬೇಯಿಸಿಕೊಳ್ಳಲು ಮುಂದಾಗಿದ್ದಾರೆ ಎಂದು ಮಾರ್ಮಿಕವಾಗಿ ನುಡಿದರು.