ಬೆಂಗಳೂರು, ಮಾ.15-ದೇಶದ ಸಂಸ್ಕøತಿ, ಸಂಸ್ಕಾರದ ರಕ್ಷಣೆಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕೆಲಸ ನಿರಂತರವಾಗಿರುತ್ತದೆ. ಆರ್ಎಸ್ಎಸ್ ಚುನಾವಣೆಯಲ್ಲಿ ಭಾಗವಹಿಸುವುದಿಲ್ಲ. ದೇಶ ಕಟ್ಟುವಲ್ಲಿ ತನ್ನ ಕೆಲಸವನ್ನು ತಾನು ಮಾಡುತ್ತಿರುತ್ತದೆ ಎಂದು ದಕ್ಷಿಣ ಭಾರತ ಕ್ಷೇತ್ರ ಸಂಘ ಸಂಚಾಲಕ ವಿ.ನಾಗರಾಜ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಆರ್ಎಸ್ಎಸ್ ಚುನಾವಣೆಗಾಗಿ ಕೆಲಸ ಮಾಡುವುದಿಲ್ಲ. ದೇಶಭಕ್ತಿ, ಸಂಸ್ಕøತಿ, ಸಂಸ್ಕಾರದ ಉಳಿವಿಗಾಗಿ ನಿರಂತರವಾಗಿ ಕೆಲಸ ಮಾಡುತ್ತದೆ. ಇದರ ಲಾಭ ಬಿಜೆಪಿಗೆ ಆದರೆ ನಾವು ಏನು ಮಾಡಲು ಆಗುವುದಿಲ್ಲ. ಆರ್ಎಸ್ಎಸ್ ಬಿಜೆಪಿಯ ಭಾಗವಲ್ಲ. ನಾವು ಯಾವುದೇ ರಾಜಕೀಯ ಪಕ್ಷಗಳೊಂದಿಗೆ ಗುರುತಿಸಿಕೊಂಡಿಲ್ಲ. ನಮ್ಮದು ಸ್ವಯಂ ಸೇವಾಸಂಘ ಎಂದು ಅವರು ಸ್ಪಷ್ಟಪಡಿಸಿದರು.
ಇತ್ತೀಚೆಗೆ ನಾಗಪುರದಲ್ಲಿ ನಡೆದ ಆರ್ಎಸ್ಎಸ್ ಕಾರ್ಯಕಾರಿಣಿ ಸಭೆಯಲ್ಲಿ ಹಲವು ಮಹತ್ವದ ಚರ್ಚೆ ಹಾಗೂ ನಿರ್ಣಯಗಳನ್ನು ಕೈ ಗೊಳ್ಳಲಾಯಿತು. ತ್ರಿಪುರಾ, ಅರುಣಾಚಲದಲ್ಲಿ ಕ್ಯಾಂಪ್ ನಡೆಸಲಾಗಿದೆ. ಭಾರತೀಯ ಭಾಷೆಗಳ ಉಳಿವಿಗಾಗಿ ನಿರ್ಣಯ ಕೈಗೊಳ್ಳಲಾಗಿದೆ. ಭಾರತೀಯ ಭಾಷೆಗಳು ಉಳಿಯದಿದ್ದರೆ ಜಾನಪದ, ಆಡುಭಾಷೆಗಳು ಇಲ್ಲದಂತಾಗುತ್ತದೆ. ಮಾತೃ ಭಾಷೆಗೆ ಧಕ್ಕೆಯಾಗುತ್ತದೆ. ಇವುಗಳನ್ನು ಉಳಿಸಿ, ಬೆಳೆಸಬೇಕಾದ ಅಗತ್ಯವಿದೆ ಎಂದು ಹೇಳಿದರು.
ಲಿಂಗಾಯತ ಪ್ರತ್ಯೇಕ ಧರ್ಮ ಶಿಫಾರಸು ವಿಚಾರದಲ್ಲಿ ಸರ್ಕಾರ ಯಾವ ನಿರ್ಧಾರ ಕೈಗೊಳ್ಳಲಿದೆಯೋ ಎಂಬುದು ಗೊತ್ತಿಲ್ಲ. ಸ್ವಾಮೀಜಿಗಳು ಈ ವಿಚಾರದಲ್ಲಿ ನಿರ್ಣಯ ಕೈಗೊಳ್ಳಬೇಕು. ಸಮಾಜ ಒಗ್ಗೂಡಿ ನಡೆಯಬೇಕೆಂಬುದು ನಮ್ಮ ನಿಲುವಾಗಿದೆ. ವೀರಶೈವ-ಲಿಂಗಾಯತರು ಹಿಂದೂ ಧರ್ಮದ ಆಚರಣೆಯಡಿಯಲ್ಲಿಯೇ ಬರುತ್ತಾರೆ. ವೀರಶೈವ-ಲಿಂಗಾಯತ ಪ್ರತ್ಯೇಕ ಮಾಡುವುದಕ್ಕೆ ನಮ್ಮ ವಿರೋಧವಿದೆ ಎಂದು ಅವರು ಹೇಳಿದರು.
ಆರ್ಎಸ್ಎಸ್ 32,248 ಸ್ಥಳಗಳಲ್ಲಿ 58,692 ಕಾರ್ಯಕ್ರಮಗಳನ್ನು ನಡೆಸಿದೆ. 86,576 ಚಟುವಟಿಕೆಗಳನ್ನು ಕೈಗೊಂಡಿದೆÉ ಎಂದು ಅವರು ವಿವರಗಳನ್ನು ನೀಡಿದರು.
ಬೈಯ್ಯಾಜಿಜೋಷಿ ಅವರ ಪುನರಾಯ್ಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಪ್ರತಿ ಮೂರುವರ್ಷಕ್ಕೊಮ್ಮೆ ಚುನಾವಣೆ ನಡೆಯುತ್ತದೆ. ಈ ಸಂದರ್ಭದಲ್ಲಿ ಬೈಯ್ಯಾಜಿಜೋಷಿ ಅವರ ಕಾಲಿಗೆ ಗಾಯವಾಗಿತ್ತು. ಆಗ ದತ್ತಾತ್ರೇಯ ಹೊಸಬಾಳೆ ಅವರ ಹೆಸರು ಕೇಳಿಬಂದಿತ್ತು. ಚುನಾವಣಾ ವೇಳೆಗೆ ಬೈಯ್ಯಾಜಿಜೋಷಿ ಗುಣಮುಖರಾಗಿದ್ದರಿಂದ ಅವರನ್ನು 2ನೇ ಬಾರಿಗೆ ಆಯ್ಕೆ ಮಾಡಲಾಯಿತು ಎಂದು ಸ್ಪಷ್ಟಪಡಿಸಿದರು.