ನವದೆಹಲಿ,ಮಾ.15-ರಾಜ್ಯ ಅಥವಾ ಕೇಂದ್ರ ಸರ್ಕಾರಿ ಉದ್ಯೋಗ ಬಯಸುವವರಿಗೆ 5 ವರ್ಷ ಮಿಲಿಟರಿ ಸೇವೆಯನ್ನು ಕಡ್ಡಾಯಗೊಳಿಸಬೇಕೆಂದು ಸಂಸದೀಯ ಸ್ಥಾಯಿ ಸಮಿತಿ ಶಿಫಾರಸು ಮಾಡಿದೆ.
ಶಿಫಾರಸ್ಸಿನಲ್ಲಿ ಸರ್ಕಾರದ ಕೆಲಸವನ್ನು ಪಡೆಯಬೇಕಾಗಿರುವವರು ಐದು ವರ್ಷಗಳ ಕಾಲ ಕಡ್ಡಾಯವಾಗಿ ಮಿಲಿಟರಿ ಸೇವೆಯನ್ನು ಪಡೆಯುವ ಬಗ್ಗೆ ಕಾಯ್ದೆಯೊಂದನ್ನು ರಚನೆ ಮಾಡಬೇಕೆಂದು ಕೇಂದ್ರ ಸರ್ಕಾರಕ್ಕೆ ಹೇಳಿದೆ.
ಭಾರತೀಯ ಸೇನೆಯಲ್ಲಿ 7000 ಅಧಿಕಾರಿಗಳು ಹಾಗೂ 20,000 ಯೋಧರ ಕೊರತೆಯಿದೆ. ವಾಯುಸೇನೆಗೆ 150 ಅಧಿಕಾರಿಗಳು ಹಾಗೂ 15,000 ಸಿಬ್ಬಂದಿಯ ಅಗತ್ಯವಿದೆ. ನೌಕಾಸೇನೆಯಲ್ಲೂ ಇದೇ ಪರಿಸ್ಥಿತಿ. ಕೇಂದ್ರ ಸರ್ಕಾರ ರೈಲ್ವೆ ಇಲಾಖೆಯಲ್ಲಿ 30 ಲಕ್ಷ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುತ್ತದೆ. ಎಲ್ಲಾ ರಾಜ್ಯಗಳಿಂದ ಸುಮಾರು 2 ಕೋಟಿಗೂ ಅಧಿಕ ಸರ್ಕಾರಿ ನೌಕರರಿದ್ದಾರೆ. ಹಾಗಾಗಿ ಮಿಲಿಟರಿ ಸೇವೆಯನ್ನು ಕಡ್ಡಾಯ ಮಾಡಿದರೆ ಭಾರತೀಯ ಸೇನೆಯಲ್ಲಿರೋ ಸಿಬ್ಬಂದಿ ಕೊರತೆಯನ್ನು ನೀಗಿಸಬಹುದು ಎಂಬುದು ಸಮಿತಿಯ ಲೆಕ್ಕಾಚಾರವಾಗಿದೆ.