ಬೆಂಗಳೂರು,ಮಾ.15- ರಾಜ್ಯಸಭೆ ಚುನಾವಣೆಯ ನಾಲ್ಕು ಸ್ಥಾನಗಳಿಗೆ ಐದು ಮಂದಿ ಅರ್ಜಿ ಸಲ್ಲಿಸಿದ್ದು, ಅರ್ಜಿ ಹಿಂಪಡೆಯಲು ಕೊನೆಯ ದಿನವಾದ ಇಂದು ಯಾರೂ ಕಣದಿಂದ ಹಿಂದೆ ಸರಿಯದ ಕಾರಣ ಚುನಾವಣೆ ಜಿದ್ದಾಜಿದ್ದಿಯಾಗಲಿದೆ.
ಕಾಂಗ್ರೆಸ್ನಿಂದ ಎಲ್.ಹನುಮಂತಯ್ಯ, ನಾಸೀರ್ ಹುಸೇನ್, ಜಿ.ಚಂದ್ರಶೇಖರ್, ಜೆಡಿಎಸ್ನಿಂದ ಬಿ.ಎಂ.ಫಾರೂಕ್, ಬಿಜೆಪಿಯಿಂದ ರಾಜೀವ್ ಚಂದ್ರಶೇಖರ್ ರಾಜ್ಯಸಭಾ ಚುನಾವಣೆಗೆ ಸ್ಪರ್ಧಿಸಿದ್ದಾರೆ.
ನಾಲ್ಕು ಸ್ಥಾನಗಳಿಗೆ ಐವರು ನಾಮಪತ್ರ ಸಲ್ಲಿಸಿದ್ದು , ಕಾಂಗ್ರೆಸ್ ಎರಡು ಸ್ಥಾನಗಳನ್ನು ಸುಲಭವಾಗಿ ಗೆಲ್ಲಲಿದೆ ಮತ್ತು ಬಿಜೆಪಿ ಒಂದು ಸ್ಥಾನವನ್ನು ತನ್ನದಾಗಿಸಿಕೊಳ್ಳಲಿದೆ. ಉಳಿದ ಸ್ಥಾನಕ್ಕೆ ಬಂಡಾಯ ಜೆಡಿಎಸ್ ಶಾಸಕರು, ಪಕ್ಷೇತರ ಶಾಸಕರ ಬೆಂಬಲದೊಂದಿಗೆ ಕಾಂಗ್ರೆಸ್ ಗೆಲುವಿನ ನಿರೀಕ್ಷೆಯಲ್ಲಿದೆ.
ಜೆಡಿಎಸ್ ಫಾರೂಕ್ ಅವರನ್ನು ಕಣಕ್ಕಿಳಿಸಿದ್ದು , 23ರಂದು ಚುನಾವಣೆ ನಡೆಯಲಿದ್ದು , ಮತದಾನದ ಸಂದರ್ಭದಲ್ಲಿ ಏನಾಗಲಿದೆ ಎಂಬುದನ್ನು ಕಾದು ನೋಡಬೇಕು.