
ಹೈದರಾಬಾದ್,ಮಾ.15- ಭ್ರಷ್ಟಾಚಾರ ನಿಗ್ರಹಕ್ಕಾಗಿ ಕೇಂದ್ರ ಸರ್ಕಾರ ಲೋಕಪಾಲ್ ನೇಮಕ ಮಾಡಬೇಕು ಎಂದು ಆಗ್ರಹಿಸಿ ಮಾ.23ರಂದು ನಿಗದಿಯಾಗಿರುವ ಅಣ್ಣಾ ಹಜಾರೆ ಅವರ ನಿರಶನ ಪ್ರತಿಭಟನೆಯಲ್ಲಿ ಭಾಗಿಯಾಗುವುದಾಗಿ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಾಧೀಶ ಮತ್ತು ಕರ್ನಾಟಕದ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ತಿಳಿಸಿದ್ದಾರೆ. ತಮ್ಮ ಹೋರಾಟದಲ್ಲಿ ಸಕ್ರಿಯರಾಗುವಂತೆ ಅಣ್ಣಾ ಹಜಾರೆ ಅವರು ಆಹ್ವಾನಿಸಿದ್ದಾರೆ. ಈ ಧರಣಿ ಎಲ್ಲಿಯವರೆಗೂ ರಾಜಕೀಯೇತರವಾಗಿರುತ್ತದೆಯೋ ಅಲ್ಲಿಯವರೆಗೂ ಅಣ್ಣಾ ಅವರ ಹೋರಾಟಕ್ಕೆ ನನ್ನ ಬೆಂಬಲ ಇದ್ದೇ ಇರುತ್ತದೆ ಎಂದು ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿ ಆಗಿದ್ದ ವೇಳೆಯೂ ಗುಜರಾತ್ನಲ್ಲಿ ಲೋಕಾಯುಕ್ತ ನೇಮಕ ಮಾಡಿರಲಿಲ್ಲ. ಪ್ರಧಾನಿ ಆದ ಬಳಿಕವೂ ಇದೇ ಮನಸ್ಥಿತಿ ಮುಂದುವರಿಸಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ಅಲ್ಲದೆ, ಲೋಕಪಾಲ್ ನೇಮಕ ಮಾಡಿದ್ದಲ್ಲಿ, ತಮ್ಮ ಕುರಿತಾದ ಸತ್ಯಗಳೇ ಬಯಲಾಗುತ್ತವೆ ಎಂಬ ಭೀತಿ ಆಡಳಿತಾರೂಢ ಪಕ್ಷಕ್ಕೆ ಇದೆ ಎಂದಿದ್ದಾರೆ.